ಸರಣಿ ಅಪಘಾತ ೯ ಮಂದಿಗೆ ಗಾಯ

ಬೆಂಗಳೂರು,ಡಿ.೨೭-ಬ್ಯಾಟರಾಯನಪುರದ ಕೆಂಪೇಗೌಡ ವಿಮಾನ ನಿಲ್ದಾಣ ಮೇಲು ಸೇತುವೆ ರಸ್ತೆಯಲ್ಲಿ ಇಂದು ಬೆಳಿಗ್ಗೆ ಐದು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿ ೯ ಮಂದಿ ಗಾಯಗೊಂಡಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗವಾಗಿ ಬಂದ ಸ್ವಿಫ್ಟ್ ಕಾರು ರಸ್ತೆ ವಿಭಜಕ(ಡಿವೈಡರ್) ಹಾರಿ ಏರ್‌ಪೋರ್ಟ್ ಕಡೆ ಹೊರಟಿದ್ದ ನಿಸಾನ್ ಕಾರಿಗೆ ಡಿಕ್ಕಿ ಹೊಡೆದಿದೆ.
ಜೊತೆಗೆ ಇಂಡಿಕಾ ಅಲ್ಟೋ ಸೇರಿ ಮೂರು ಕಾರುಗಳಿಗೆ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ವರಿಗೆ ಗಾಯಗೊಂಡರೆ ಇಂಡಿಕಾ ಕಾರು ಚಾಲಕ ಸೇರಿ ಸರಣಿ ಅಪಘಾತದಿಂದ ಒಟ್ಟು ೯ ಮಂದಿ ಗಾಯಗೊಂಡಿದ್ದಾರೆ.
ಅಪಘಾತದಿಂದ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ಸಂಚಾರ ಅಸ್ಥವ್ಯಸ್ಥಗೊಂಡಿದ್ದು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೆಬ್ಬಾಳ ಸಂಚಾರ ಪೊಲೀಸರು ಧಾವಿಸಿ ಅಪಘಾತದಲ್ಲಿ ಜಖಂಗೊಂಡ ಕಾರುಗಳ ತೆರವು ಮಾಡಿ, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಈ ಸರಣಿ ಅಪಘಾತವು ಬೈಕ್ ಸವಾರರ ಜಾಲಿ ರೈಡ್ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ. ಭಾನುವಾರವಾದ್ದರಿಂದ ಬೈಕ್ ಸವಾರರು ಏರ್‌ಪೋರ್ಟ್ ರಸ್ತೆಯಲ್ಲಿ ನಂದಿಬೆಟ್ಟದ ಕಡೆಗೆ ಜಾಲಿ ರೈಡ್ ಹೋಗುತ್ತಿದ್ದರು ವೇಗವಾಗಿ ಬರುತ್ತಿದ್ದ ಬೈಕ್ ಸವಾರರು ಸ್ವಿಫ್ಟ್ ಕಾರನ್ನು ಹಿಂದಿಕ್ಕಿ ಚಮಕ್ ಕೊಟ್ಟಿದ್ದರು.ಈ ವೇಳೆ ಗಾಬರಿಯಾದ ಕಾರು ಚಾಲಕ, ಎದುರು ರಸ್ತೆಗೆ ನುಗ್ಗಿದ್ದ ಪರಿಣಾಮ ಕಾರು ಪಲ್ಟಿಯಾಗಿದೆ.
ಆಗ ಏರ್‌ಪೋರ್ಟ್ ಕಡೆಯಿಂದ ಬರುತ್ತಿದ್ದ ನಿಸಾನ್ ಹಾಗೂ ಸ್ವಿಫ್ಟ್ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ವೇಳೆ ಐದು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಮೂರು ಕಾರುಗಳು ಪಲ್ಟಿಯಾಗಿವೆ.