ಸರಣಿ ಅಪಘಾತ: ಹೊತ್ತಿ ಉರಿದ ಆಂಬ್ಯುಲೆನ್ಸ್ ಮಹಿಳಾ ರೋಗಿ ಸೇರಿ ಐವರಿಗೆ ಗಂಭೀರ ಗಾಯ

ನೆಲಮಂಗಲ, ಏ. 30- ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್, ಕಂಟೈನರ್ ಹಾಗೂ ಇನ್ನೋವಾ ಕಾರಿನ ನಡುವೆ ನಡೆದ ಸರಣಿ ಅಪಘಾತದಲ್ಲಿ ಆಂಬ್ಯುಲೆನ್ಸ್‌ಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮಹಿಳಾ ರೋಗಿ ಸೇರಿದಂತೆ 5 ಮಂದಿ ಗಂಭೀರವಾಗಿ ಗಾಯಗೊಂಡು, ಓರ್ವ ಮಹಿಳೆ ದೇಹ ಭಾಗಶಃ ಸುಟ್ಟು ಹೋಗಿರುವ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-4ರ ಎಡೆಹಳ್ಳಿ ಬಳಿ ನಡೆದಿದೆ.
ಎಡೆಹಳ್ಳಿ ಬಳಿ ಸಂಭವಿಸಿದ ಸರಣಿ ಅಪಘಾತದಲ್ಲಿ ಡಿಕ್ಕಿಯ ರಭಸಕ್ಕೆ ಓಮಿನಿ ಆಂಬ್ಯುಲೆನ್ಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅದೇ ಸಮಯಕ್ಕೆ ನೀರಿನ ಟ್ಯಾಂಕರ್ ಕೊಂಡೊಯ್ಯುತ್ತಿದ್ದ ಟ್ರ್ಯಾಕ್ಟರ್‌ ಚಾಲಕ ತಕ್ಷಣ ಬೆಂಕಿ ಹೊತ್ತಿ ಉರಿಯುತ್ತಿದ್ದ ಆಂಬ್ಯುಲೆನ್ಸ್ ಮೇಲೆ ಸ್ಥಳೀಯರ ಸಹಾಯದೊಂದಿಗೆ ನೀರು ಹಾಕಿ ಬೆಂಕಿಯನ್ನು ನಂದಿಸುವ ಮೂಲಕ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಹೊತ್ತಿ ಉರಿಯುತ್ತಿದ್ದ ಆಂಬ್ಯುಲೆನ್ಸ್‌ಗೆ ನೀರು ಹಾಯಿಸಿ ಬೆಂಕಿ ನಂದಿಸುತ್ತಿದ್ದಂತೆ ಸ್ಥಳೀಯರು ಆಂಬ್ಯುಲೆನ್ಸ್ ಒಳಗೆ ಸಿಲುಕಿದ್ದ ಐವರನ್ನು ಹೊರಗೆ ಕರೆತರುವ ಮೂಲಕ ಅವರ ಪ್ರಾಣವನ್ನು ರಕ್ಷಿಸಿದ್ದಾರೆ.
ಟ್ರ್ಯಾಕ್ಟರ್ ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಬೇಕಾದ ಭಾರೀ ಅನಾಹುತವೊಂದು ತಪ್ಪಿದಂತಾಗಿದ್ದರೂ ಸಹ ಆಂಬ್ಯುಲೆನ್ಸ್‌ನಲ್ಲಿದ್ದ ಹಸೀನಾ (50), ಶಬೀನಾ (45) ಇವರಿಬ್ಬರಿಗೂ ಸುಟ್ಟ ಗಾಯಗಳಾಗಿದ್ದು, ಈ ಪೈಕಿ ಓರ್ವ ಮಹಿಳೆಯ ದೇಹ ಭಾಗಶಃ ಸುಟ್ಟಿದೆ ಎಂದು ಹೇಳಲಾಗುತ್ತಿದೆ. ಸಲ್ಮಾನ್ (20), ಆಂಬ್ಯುಲೆನ್ಸ್ ಚಾಲಕ ಸಾಧಿಕ್ (23) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಮತ್ತೋರ್ವ ಸಾಧಿಕ್ ಎಂಬಾತನಿಗೆ ಕಾಲು ಮುರಿದಿದೆ.
ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಹಿಳೆಯರು ಹಾಗೂ ಕಾಲು ಮುರಿದಿರುವ ಸಾಧಿಕ್‌ ಎಂಬಾತನಿಗೆ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಆಂಬ್ಯುಲೆನ್ಸ್‌ನಲ್ಲಿದ್ದವರೆಲ್ಲಾ ತುಮಕೂರಿನ ಸಿರಾಗೇಟ್ ನಿವಾಸಿಗಳಾಗಿದ್ದು, ಮಹಿಳಾ ರೋಗಿಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು ಎನ್ನಲಾಗಿದೆ.
ಸರಣಿ ಅಪಘಾತದಿಂದ ಆಂಬ್ಯುಲೆನ್ಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಟನೆಯ ಸುದ್ದಿ ತಿಳಿದ ಕೂಡಲೇ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.