ಸರಣಿ ಅಪಘಾತ: ತಪ್ಪಿದ ದುರಂತ

ಉಳ್ಳಾಲ, ಜು.೧೬- ರಾ.ಹೆ. 66ರ ತೊಕ್ಕೊಟ್ಟಿನ ಕಾಪಿಕಾಡು ಎಂಬಲ್ಲಿ ಲಾರಿ ಮತ್ತು ಎರಡು ಕಾರುಗಳ ನಡುವೆ ನಡೆದ ಸರಣಿ ಅಪಘಾತದಲ್ಲಿ ಧಾರ್ಮಿಕ ಮುಂದಾಳು ಕೆ.ಪಿ. ಸುರೇಶ್ ಅವರು ಚಲಾಯಿಸುತ್ತಿದ್ದ ಕಾರು ಡಿವೈಡರ್ ಮೇಲೇರಿದ್ದು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಮಾಡೂರು ಶ್ರೀ ಸಾಯಿಬಾಬ ಮಂದಿರದ ಮೊಕ್ತೇಸರರಾದ ಕೆ.ಪಿ ಸುರೇಶ್ ಅವರು ಶುಕ್ರವಾರ ಬೆಳಗ್ಗೆ ತಮ್ಮ ಕಾರಲ್ಲಿ ಮಂಗಳೂರು ಕಡೆಗೆ ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ಕಾಪಿಕಾಡು ಎಂಬಲ್ಲಿ ಸ್ಕೂಟರಲ್ಲಿ ತೆರಳುತ್ತಿದ್ದ ಇಬ್ಬರು ಮಹಿಳೆಯರು ನಿಯಂತ್ರಣ ತಪ್ಪಿ ಕೆಳಗುರುಳಿದ್ದಾರೆ. ಮಹಿಳೆಯರಿಗೆ ಸಹಾಯ ಮಾಡಲು ಸುರೇಶ್ ಅವರು ತನ್ನ ಕಾರನ್ನ ಹೆದ್ದಾರಿ ಡಿವೈಡರ್ ಪಕ್ಕದಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಕೇರಳ ನೋಂದಣಿ ಕಾರೊಂದು ಕಾಪಿಕಾಡಲ್ಲಿ ರಸ್ತೆ ಕ್ರಾಸ್ ಮಾಡುತ್ತಿದ್ದ ಟೆಂಪೊವೊಂದನ್ನ ತಪ್ಪಿಸುವ ಭರದಲ್ಲಿ ಸುರೇಶ್ ಅವರ ಕಾರಿನ‌ ಹಿಂಬದಿಗೆ ಬಲವಾಗಿ ಢಿಕ್ಕಿ ಹೊಡೆದಿದ್ದು ಸುರೇಶ್ ಅವರ ಕಾರು ಡಿವೈಡರ್ ಮೇಲಕ್ಕೇರಿದೆ. ಹಿಂದಿನಿಂದ ಅತೀ ವೇಗದಲ್ಲಿ ಬಂದ ಸರಕು ಲಾರಿಯು ಕೇರಳ ನೊಂದಣಿ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡು ಕಾರುಗಳು ನಜ್ಜು ಗುಜ್ಜಾಗಿದ್ದು ಅದೃಷ್ಟವಶಾತ್ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.