ಸರಣಿ ಅಪಘಾತ : ಐವರು ಸಾವು 24 ವಾಹನಗಳು ಜಖಂ

ಗಾಜಿಯಾಬಾದ್,ನ.೬-ದಟ್ಟಮಂಜು ಆವರಿಸಿದ್ದರಿಂದ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ
ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ೨೪ ವಾಹನಗಳು ಜಖಂಗೊಂಡು ನಿವೃತ್ತ ಪೊಲೀಸ್ ಅಧಿಕಾರಿ ಯೊಬ್ಬರು ಸೇರಿ ಐವರು ಸಾವನ್ನಪ್ಪಿದ್ದಾರೆ.
ಮೃತರನ್ನು ಗಾಜಿಯಾಬಾದ್ ಮೂಲದ ಉತ್ತರಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿ ವೇದ್ ಪ್ರಕಾಶ್ ಯಾದವ್, ಅವರ ಪತ್ನಿ ಪ್ರೇಮಲಾಲಾ (೫೫),ಪುತ್ರ ಶಿವ ಸಾಗರ್ ಯಾದವ್ (೨೭), ಅವರ ಸೋದರ ಸಂಬಂಧಿ ಗೌರವ್ (೨೯) ಮತ್ತು ಕಿರಿಯ ಸಹೋದರ ಮೋಹಿನೇಶ್ ಅವರ ಸ್ನೇಹಿತ ಆರ್ಯನ್ ಚೌಧರಿ (೨೨) ಮತ್ತು ಬಸ್ ಚಾಲಕ ಬಲ್ವಂತ್ ಸಿಂಗ್ ಮೃತಪಟ್ಟವರು.
ದಟ್ಟಮಂಜು ಆವರಿಸಿರುವುದರಿಂದ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆಯ ನಂತರ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದ್ದವು. ನಂತರ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಟ್ರಾಫಿಕ್ ಜಾಮ್ ತೆರವುಗೊಳಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಕ್ರೇನ್‌ಗಳ ಮೂಲಕ ಜಖಂಗೊಂಡ ವಾಹನಗಳನ್ನು ತೆರವುಗೊಳಿಸಲಾಯಿತು. ದೀಪಾವಳಿಯ ನಂತರದ ರಾತ್ರಿ ರಾಷ್ಟ್ರೀಯ ರಾಜಧಾನಿ ದೆಹಲಿಯ ಹಲವಾರು ಪ್ರದೇಶಗಳಲ್ಲಿ ಹವಾಮಾನ ಗುಣಮಟ್ಟ ತೀವ್ರವಾಗಿ ಹದಗೆಟ್ಟಿತ್ತು. ಬೆಳಿಗ್ಗೆ ಎಂಟು ಗಂಟೆಗೆ ಅನೇಕ ಪ್ರದೇಶಗಳಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗಿತ್ತು.
ನಿನ್ನೆ ಬೆಳಗ್ಗೆ ೪ ಗಂಟೆ ಸುಮಾರು ಮಥುರಾದ ನೌಜೀಲ್ ಪ್ರದೇಶದ ೭೧ ನೇ ಮೈಲಿಗಲ್ಲು ಬಳಿ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಅಧಿಕಾರಿಯ ಪತ್ನಿ, ಮಗ ಹಾಗೂ ಆಗ್ರಾ-ನೋಯ್ಡಾ ಬಸ್‌ನ ಚಾಲಕ ಸೇರಿ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಶಿರೀಶ್ ಚಂದ್ರ ತಿಳಿಸಿದ್ದಾರೆ.
ಮುಂಜಾನೆ ೪ ಗಂಟೆಗೆ ನೋಯ್ಡಾಗೆ ತೆರಳುತ್ತಿದ್ದ ಖಾಸಗಿ ಬಸ್‌ನ ಚಾಲಕ ನಿದ್ರಾಹೀನತೆಯಿಂದ ವಾಹನವನ್ನು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಕಾರಣ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಕಾರಿನಲ್ಲಿದ್ದವರ ಐವರು ಪೈಕಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮೊದಲು ಮಥುರಾದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುವನ್ನು ಆಗ್ರಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪಂಜಾಬ್‌ನ ಪಠಾಣ್‌ಕೋಟ್ ನಿವಾಸಿ ಮೋಹಿನೇಶ್ ಆಗ್ರಾದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಶಿರೀಶ್ ಚಂದ್ರ ತಿಳಿಸಿದ್ದಾರೆ.