ಸರಣಿ ಅಪಘಾತ: ಇಬ್ಬರು ಗಂಭೀರ

ಮುಂಜಾನೆ ಕೊಡಾಜೆಯಲ್ಲಿ ನಡೆದ ಅವಘಡ: ಪೊಲೀಸರಿಂದ ಪರಿಶೀಲನೆ
ಬಂಟ್ವಾಳ, ಎ.೨೩- ಮಾಣಿ – ಮಠ ರಸ್ತೆಯ ಅಪಘಾತ ವಲಯ ಎಂದೇ ಹೇಳಲಾಗುತ್ತಿರುವ ಕೊಡಾಜೆಯಲ್ಲಿ ಮತ್ತೆ ಅಪಘಾತ ಸಂಭವಿಸಿದೆ. ಮತ್ತೆ ಮೂರು ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿ, ಇಬ್ಬರು ಗಂಭೀರ ಗಾಯಗೊಂಡ ಘಟನೆ ಇಂದು (ಶುಕ್ರವಾರ) ಮುಂಜಾನೆ ನಡೆದಿದೆ.


ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಮತ್ತು ಮಾಣಿಯಿಂದ ಪುತ್ತೂರಿಗೆ ತೆರಳುತ್ತಿದ್ದ ಟಾಟಾ ಏಸ್ ವಾಹನ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಈ ವೇಳೆ ಟಾಟಾ ಏಸ್ ವಾಹನದ ಹಿಂದಿನಿಂದ ಬರುತ್ತಿದ್ದ ಬೈಕ್ ನಿಯಂತ್ರಣ ಕಳೆದು ಟಾಟಾ ಏಸ್‌ಗೆ ಢಿಕ್ಕಿಯಾಗಿದೆ. ಘಟನೆಯಿಂದ ಟಾಟಾ ಏಸ್ ಚಾಲಕ ಮತ್ತು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡವರ ವಿವರ ತಿಳಿದುಬರಬೇಕಿದೆ. ಅಪಘಾತದಿಂದ ಸ್ಥಳದಲ್ಲಿ ಕೆಲವು ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.