ಸರಗಳ್ಳರ ಸೆರೆ ೩೦ ಲಕ್ಷ ಮೌಲ್ಯದ ಚಿನ್ನ ವಶ

ಹಾಸನ,ಏ.೨೭- ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಚಿನ್ನದ ಸರವನ್ನು ದೋಚುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಾಮರಾಜನಗರ ಗೋಪಾಲ್@ ಗೋಪಿ (೩೯) ಹಾಗೂ ರಮೇಶ್ (೪೫) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಸುಮಾರು ೬೬೦ ಗ್ರಾಂ ತೂಕದ ೩೦ ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಟೋ ಚಾಲಕನಾದ ಗೋಪಾಲ್ ಮತ್ತು ಎಳನೀರು ವ್ಯಾಪಾರಿ ರಮೇಶ್ ಆರೋಪಿಗಳು ಮದ್ಯಪಾನ ಜೂಜಾಟ ಮತ್ತು ದುಶ್ಚಟಗಳಿಗೆ ಬಲಿಯಾಗಿ ಹಣವನ್ನು ಹೊಂದಿಸಲು ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳವು ಮಾಡುತ್ತಿದ್ದರು.
ಕಳೆದ ಸೆ. ೨೯ರಂದು ಚನ್ನರಾಯಪಟ್ಟಣದ ಗೌಡರಹಳ್ಳಿಯ ಇಂದ್ರಮ್ಮ ಬಟ್ಟೆ ತೊಳೆಯಲು ಎಂದು ಕೆರೆಗೆ ಹೋಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಹಿಂಬದಿಯಿಂದ ಕುತ್ತಿಗೆಯನ್ನು ಹಿಡಿದು ಮಾಂಗಲ್ಯ ಸರ ಕಿತ್ತುಕೊಂಡು ಹೋಗಿದ್ದ.
ಇಂದ್ರಮ್ಮರ ಕುಟುಂಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು, ದೂರಿನನ್ವಯ ಎಸ್ಪಿ ಶ್ರೀನಿವಾಸಗೌಡ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಂದಿನಿ ಹಾಗೂ ಡಿವೈಎಸ್ಪಿ ಲಕ್ಷ್ಮೇಗೌಡ ನೇತೃತ್ವದಲ್ಲಿ ವಿಶೇಷ ಮೂರು ತಂಡಗಳನ್ನು ರಚನೆ ಮಾಡಿ ತನಿಖೆ ಆರಂಭಿಸಿದ್ದರು.
೨೨ ಪ್ರಕರಣಗಳಲ್ಲಿ ಭಾಗಿ:
ಬಂಧಿತ ಆರೋಪಿಗಳು ಹಿರಿಸಾವೆ- ೧ ಚನ್ನರಾಯಪಟ್ಟಣ ನಗರ ೨ ಪ್ರಕರಣ, ಶ್ರವಣಬೆಳಗೊಳ ೨ ಪ್ರಕರಣ, ಮಂಡ್ಯ ಜಿಲ್ಲೆಯ ಬಿಂಡಿಗನವಿಲೆ ೩, ಕೆ ಆರ್ ಪೇಟೆ ೨ ನಾಗಮಂಗಲ ೩, ಪಾಂಡವಪುರ ೨ ಮೇಲುಕೋಟೆ, ಅರಕೆರೆ ಬಸರಾಳು ೧, ಶ್ರೀರಂಗ ತಲಾ ಒಂದೊಂದು ಪ್ರಕರಣ, ೨೨ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.