ಸರಗಳ್ಳತನ ಆಂಧ್ರ ಬಾಡಿ ಬಿಲ್ಡರ್ ಸೇರಿ ಇಬ್ಬರ ಬಂಧನ

ಬೆಂಗಳೂರು,ಏ.೨೫-ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತಗೊಂಡು ಮಿಸ್ಟರ್ ಆಂಧ್ರ ಎಂದೇ ಬಿರುದು ಪಡೆದುಕೊಂಡಿದ್ದ ಯುವಕ ಸುಲಭವಾಗಿ ಹಣ ಸಂಪಾದನೆ ಮಾಡಲು ಸರಗಳ್ಳತನಕ್ಕೆ ಇಳಿದು ತುಳಿದು ನಗರದ ದಕ್ಷಿಣ ವಿಭಾಗದ ಪೊಲೀಸರ ಅತಿಥಿಯಾಗಿದ್ದಾನೆ.
ಆಂಧ್ರ ಸೇರಿ ನಗರದಲ್ಲಿ ಸರಗಳ್ಳತನ ಮಾಡುತ್ತಿದ್ದ ಬಾಡಿ ಬಿಲ್ಡರ್ ಸೇರಿ ಇಬ್ಬರನ್ನು ಗಿರಿನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಿಸ್ಟರ್ ಆಂಧ್ರ ಖ್ಯಾತಿಯ ಕಡಪದ ರವೀಂದ್ರನಗರದ ಸೈಯ್ಯದ್ ಬಾಷಾ(೩೪) ಹಾಗೂ ಸಹಚರ ಶೇಖ್ ಆಯೂಬ್ (೩೨) ಬಂಧಿತ ಆರೋಪಿಗಳಾಗಿದ್ದಾರೆ ಅವರಿಂದ ೬ ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಎರಡು ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದಾರೆ.
ಬಂಧಿತ ಸೈಯ್ಯದ್ ಭಾಷಾ ೨೦೦೫ ರಿಂದ ೨೦೧೫ ರ ಕುವೈತ್?ನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು,ಅಲ್ಲಿರುವಾಗಲೇ ಗೋಲ್ಡ್ ಸ್ಮಗ್ಲಿಂಗ್? ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.
ಮಿಸ್ಟರ್ ಆಂಧ್ರ ಪಟ್ಟ:
ಕೊರೊನಾ ಬಿಕ್ಕಟ್ಟು ಹಿನ್ನಲೆಯಲ್ಲಿ ಭಾರತಕ್ಕೆ ಬಂದಿದ್ದ ಈತ ದೈಹಿಕ ಕಸರತ್ತು ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ.ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿ ಮಿಸ್ಟರ್ ಆಂಧ್ರ ಎಂದು ಪಟ್ಟಗಿಟ್ಟಿಸಿಕೊಂಡಿದ್ದ.
ಸುಲಭವಾಗಿ ಹಣ ಸಂಪಾದನೆ ಮಾಡಲು ಅಡ್ಡದಾರಿ ತುಳಿದ ಅಪರಾಧ ಲೋಕದ ಪಾತಕಿಗಳ ಸಂಪರ್ಕ ಬೆಳೆಸಿಕೊಂಡು ನಿರಂತರವಾಗಿ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.
ಹೀಗಾಗಿ ಸ್ಥಳೀಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಸೆರೆಮನೆಯಲ್ಲಿರುವಾಗ ಕೈದಿಯೊಬ್ಬ ಬೆಂಗಳೂರಿನಲ್ಲಿ ಸುಲಭವಾಗಿ ಕಳ್ಳತನ ಮಾಡಬಹುದು ಎಂದು ಸಲಹೆ ನೀಡಿದ್ದ. ಇದರಂತೆ ಜಾಮೀನು ಪಡೆದು ಹೊರಬಂದು ಬೆಂಗಳೂರಿಗೆ ಬಂದಿದ್ದ. ಆರೋಪಿ ಗಿರಿನಗರ ಹಾಗೂ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಸದ ಮೊಬೈಲ್ :
ಕಡಪದಿಂದ ರಾಜಧಾನಿಗೆ ಬಂದು ಬೈಕ್ ಕಳವು ಮಾಡಿ ಅದರಲ್ಲಿ ಸಂಚರಿಸುತ್ತಾ ಸರಗಳ್ಳತನ ಮಾಡಲು ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಕಿ ಒಂಟಿಯಾಗಿ ಓಡಾಡುವ ವೃದ್ದೆಯರು ಹಾಗೂ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದ.
ಕೃತ್ಯವೆಸಗಿದ ಬಳಿಕ ಬೆಂಗಳೂರು ತೊರೆಯದೇ ಠಾಣಾ ವ್ಯಾಪ್ತಿಯಲ್ಲಿ ಓಡಾಡಿಕೊಂಡಿದ್ದರು.ಸ್ಥಳೀಯ ಪ್ರದೇಶಗಳಲ್ಲಿ ಓಡಾಡಿಕೊಂಡಿದ್ದರೆ ಪೊಲೀಸರಿಗೆ ನಾವು ಸಿಗುವುದಿಲ್ಲ ಎಂದು ಖದೀಮರು ಭಾವಿಸಿಕೊಂಡಿದ್ದರು. ಬಂಧಿಸಲು ಪೊಲೀಸರಿಗೆ ಸಹಾಯವಾಗಲಿದೆ ಎಂದು ಅರಿತು ಆರೋಪಿಗಳು ಮೊಬೈಲ್ ಬಳಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
ಜಿಪಿಎಸ್ ನಿಂದ ಪತ್ತೆ:
ಇದಲ್ಲದೇ ಸರಗಳ್ಳತನ ಮಾಡಿ ಕೂಡಲೇ ಬಟ್ಟೆ ಬದಲಿಸುತ್ತಿದ್ದ ಖದೀಮರು, ಸಿಸಿಟಿಯಲ್ಲಿ ಚಹರೆ ಗೊತ್ತೇ ಆಗದಂತೆ ಪರಾರಿಯಾಗುತ್ತಿದ್ದರು.ಗಿರಿನಗರದಲ್ಲಿ ನಡೆದಿದ್ದ ಸರಗಳವು ಪ್ರಕರಣ
ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರಿಗೆ, ಸಿಸಿಟಿವಿ ಪರಿಶೀಲಿಸಿದಾಗ ಕಳವು ಮಾಡಿದ ಬೈಕ್ ಪತ್ತೆಯಾಗಿತ್ತು.
ಕಳವು ಮಾಡಿದ್ದ ಬೈಕ್‌ಗೆ ಜಿಪಿಎಸ್ ಅಳವಡಿಸಿ, ಪ್ರತಿದಿನ ಜಿಪಿಎಸ್ ಮೇಲೆ ನಿಗಾ ವಹಿಸಿ ೨೦ ದಿನಗಳ ಬಳಿಕ ಮತ್ತೆ ಬಂದ ಆರೋಪಿಗಳು ಕದ್ದ ಬೈಕ್‌ನಲ್ಲೇ ಫೀಲ್ಡಿಗಿಳಿದ ಕೂಡಲೇ ಕೈಗೊಂಡು ಕಾರ್ಯಾಚರಣೆ ಕೈಗೊಂಡು ಬಂಧಿಸಿದ್ದಾರೆ.
ವಿಚಾರಣೆಯಲ್ಲಿ ಆರೋಪಿಗಳು ಆಂಧ್ರದಲ್ಲಿ ಸರಗಳವು ಸೇರಿ ವಿವಿಧ ೩೨ ಪ್ರಕರಣಗಳಲ್ಲಿ ಸೈಯದ್ ಬಾಷಾ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದರು.