ಸರಕು ಹಡಗುಗಳು ಡಿಕ್ಕಿ ಕಟ್ಟೆಚ್ಚರ

ಕಚ್ (ಗುಜರಾತ್),ನ.27-ಎರಡು ಸರಕು ಸಾಗಿಸುವ ಹಡಗುಗಳು ಡಿಕ್ಕಿ ಹೊಡೆದಿರುವ ಘಟನೆ ಕಚ್ ಕೊಲ್ಲಿಯಲ್ಲಿ ನಡೆದಿದ್ದು ಕಟ್ಟೆಚ್ಚರ ವಹಿಸಲಾಗಿದೆ.
ಏವಿಯೇಟರ್ ಹಾಗೂ ಎಂವಿ ಏನ್ಷಿಯಂಟ್ ಗ್ರೇಸ್ ಎಂಬ ಎರಡು ಹಡಗುಗಳು ಅಪಘಾತಕ್ಕೀಡಾಗಿದ್ದು ಭಾರತೀಯ ಕೋಸ್ಟ್ ಗಾರ್ಡ್ ಪರಿಸ್ಥಿತಿಯ ಮೇಲೆ ನಿಗಾ ಇರಿಸಿರುವುದಾಗಿ ಐಸಿಜಿ ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 26ರ ರಾತ್ರಿ ಈ ಘರ್ಷಣೆ ಸಂಭವಿಸಿದ್ದು ಮಾಲಿನ್ಯ ನಿಯಂತ್ರಣ ನೌಕೆ ಸೇರಿದಂತೆ ಪ್ರದೇಶದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಹಡುಗುಗಳು ಸಮೀಪದಲ್ಲಿ ಮುಂಜಾಗ್ರತಾ ಕ್ರಮವಾಗಿ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದು ಗುಜರಾತ್‌ನ ಡಿಫೆನ್ಸ್‌ ಪಿಆರ್‌ಒ ಮೂಲಗಳು ತಿಳಿಸಿವೆ.
ನ್ಯಾವಿಗೇಷನಲ್ ದೋಷದಿಂದ ಘರ್ಷಣೆ ಸಂಭವಿಸಿದೆ.ಯಾವುದೇ ಸಂಭವನೀಯ ತೈಲ ಸೋರಿಕೆಯನ್ನು ತಡೆಯಲು ಭಾರತೀಯ ಕೋಸ್ಟ್ ಗಾರ್ಡ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಐಸಿಜಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.