ಸರಕು ಸಾಗಾಟ ಹಡಗಿನ ಮೇಲೆ ಹೌಥಿ ದಾಳಿ: ಮೂವರು ಮೃತ್ಯು

ಸನಾ (ಯೆಮೆನ್), ಮಾ.೭- ದಕ್ಷಿಣ ಯೆಮೆನ್‌ನ ಅಮೆರಿಕಾ ಒಡೆತನದ ಸರಕು ಹಡಗಿನ ಮೇಲೆ ಹೌತಿ ಕ್ಷಿಪಣಿ ದಾಳಿಯಲ್ಲಿ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಮೂಲಕ ಸರಕು ಸಾಗಾಟ ಹಡಗಿನ ಮೇಲೆ ಇತ್ತೀಚಿಗಿನ ದಿನಗಳಲ್ಲಿ ನಡೆಯುತ್ತಿರುವ ದಾಳಿಯಲ್ಲಿ ಇದೇ ಮೊದಲ ಬಾರಿಗೆ ಸಾವಿನ ಪ್ರಕರಣಗಳು ನಡೆದಿದೆ. ದಾಳಿಯ ಬಳಿಕ ಆಕ್ರೋಶಗೊಂಡಿರುವ ಯುಎಸ್ ವಾಯುಪಡೆ ಹೌಥಿ ಪಡೆಗಳು ನಿಯಂತ್ರಿತ ಕೆಂಪು ಸಮುದ್ರದ ಬಂದರು ನಗರವಾದ ಹುದೈದಾದಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿದೆ.
ಯೆಮನ್‌ನ ಬಂದರು ನಗರ ಏಡನ್ ನೈಋತ್ಯದಲ್ಲಿ ಸಾಗುತ್ತಿದ್ದ ಯುಎಸ್ ಒಡೆತನದ, ಬಾರ್ಬಡೋಸ್ ಧ್ವಜ ಹೊಂದಿದ್ದ ಹಡಗಿನ ಬಳಿ ಭಾರೀ ಸ್ಫೋಟ ಸಂಭವಿಸಿದೆ ಎಂದು ಸಮುದ್ರ ಭದ್ರತಾ ಸಂಸ್ಥೆ ವರದಿ ಮಾಡಿದೆ. ಹಡಗಿನ ಸಮೀಪ ಸ್ಫೋಟ ಸಂಭವಿಸಿರುವ ಬಗ್ಗೆ ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಹಡಗಿನ ಸಿಬಂದಿ ಮಾಹಿತಿ ನೀಡಿದ್ದಾರೆ. ಇನ್ನು ದಾಳಿಯ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಕಾರ್ಯಾಚರಣೆಯನ್ನು ನೋಡಿಕೊಳ್ಳುವ ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್)ನ ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಇತರೆ ಮೂವರು ಗಂಭೀರ ಸೇರಿದಂತೆ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ. ಹೌತಿಗಳ ಈ ಅಜಾಗರೂಕ ದಾಳಿಗಳು ಜಾಗತಿಕ ವ್ಯಾಪಾರವನ್ನು ಅಡ್ಡಿಪಡಿಸಿವೆ ಮತ್ತು ಅಂತಾರಾಷ್ಟ್ರೀಯ ನಾವಿಕರ ಜೀವಗಳನ್ನು ತೆಗೆದುಕೊಂಡಿವೆ” ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ. ಯೆಮನ್ ಬಳಿ ಹಡಗಿನ ಮೇಲೆ ದಾಳಿ ನಡೆದಿರುವುದನ್ನು ಬ್ರಿಟನ್ ನೌಕಾಪಡೆಯೂ ದೃಢಪಡಿಸಿದೆ. ಕಳೆದ ಹಲವು ವಾರಗಳಿಂದ ಹೌಥಿಗಳಿಂದ ಕೆಂಪು ಸಮುದ್ರದಲ್ಲಿ ಸಾಗುವ ಸರಕು ಸಾಗಾಟ ಹಡುಗಳುಗಳ ಮೇಲೆ ದಾಳಿ ನಡೆಯುತ್ತಿರುವ ಸಂಗತಿ ಬೆಳಕಿಗೆ ಬರುತ್ತಲೇ ಇದೆ. ಆದರೆ ಇದೀಗ ಇದೇ ಮೊದಲ ಬಾರಿಗೆ ದಾಳಿಯಲ್ಲಿ ಸಾವಿನ ಪ್ರಕರಣ ಬೆಳಕಿಗೆ ಬಂದಿದೆ. ಹಾಗಾಗಿ ಮುಂದೆ ಕೆಂಪು ಸಮುದ್ರದಲ್ಲಿ ಸರಕು ಸಾಗಾಟ ಹಡಗುಗಳು ಸಾಗಲು ಹಿಂದೇಟು ನಡೆಸುವ ಸಾಧ್ಯತೆ ಇದ್ದು, ಇದರಿಂದ ಜಾಗತಿಕ ಪೂರೈಕೆ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ.