
ಬಸವಕಲ್ಯಾಣ: ಎ.24:ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಬಸವ ಜಯಂತಿ ನಿಮಿತ್ತ ಭಾನುವಾರ ಬೆಳಿಗ್ಗೆ ನಗರದಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಮೆರವಣಿಗೆ ಜರುಗಿತು. ಶ್ರೀ ಬಸವೇಶ್ವರ ದೇವಸ್ಥಾನದಿಂದ ಕಾಳಿಗಲ್ಲಿಯ ಮಾರ್ಗವಾಗಿ ಐತಿಹಾಸಿಕ ಕೋಟೆಯ ಮೂಲಕ ಮುಖ್ಯ ರಸ್ತೆಯ ಮಾರ್ಗವಾಗಿ ಹರಳಯ್ಯ ವೃತ್ತದ ವರೆಗೂ ಸಾಗಿತು.
ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಸುಕಿನ ಜಾವ ಬಸವಣ್ಣನವರ ಮೂರ್ತಿಗೆ ಅಷ್ಟಗಂಧ ಪೂಜೆ, ಬಸವ ಭಕ್ತರಿಂದ ವಚನ ಪಠಣ ಜರುಗಿತು. ನಂತರ ಬಸವಣ್ಣನವರ ಬೆಳ್ಳಿ ತೊಟ್ಟಿಲ ಪೂಜೆ ಮಾಡಿ ಮುಚಳಂಬನ ಶ್ರೀ ಪ್ರಣವಾನಂದ ಸ್ವಾಮೀಜಿ ಹಾಗೂ ಬಸವರಾಜ ಪಾಟೀಲ ಸೇಡಂ ಅವರು ಈ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿಪಾಲ್ಗೊಂಡ ಜನರು ತಲೆಯ ಮೇಲೆ ಟೋಪಿ ಹಾಗೂ ಬೆನ್ನಿಗೆ ಷಟಸ್ಥಲದ ಸ್ಕರ್ಟ ಹಾಕಿ ಸಾಗಿದರು. ಮೆರವಣಿಗೆಯ ಯುದ್ದಕ್ಕೂ ವಚನ ಗಾಯನ, ತೆರೆದ ವಾಹನದಲ್ಲಿ ಶ್ರೀ ಬಸವೇಶ್ವರ ಶಾಲಾ ವಿದ್ಯಾರ್ಥಿಗಳಿಂದ ವಚನ ನೃತ್ಯ ಗಮನ ಸೆಳೆದರೆ ಭಾಗವಹಿಸಿದ ಮಹಿಳೆಯರಿಂದ ಕೋಲಾಟ ನೋಡುಗರ ಗಮನ ಸೆಳೆಯಿತು.
ಮೆರವಣಿಗೆಯ ಮುಂಭಾಗದಲ್ಲಿ ಅಲಂಕೃತಗೊಳಿಸಿದ ವಾಹನದಲ್ಲಿ ಬಸವಣ್ಣನವರ ಬೆಳ್ಳಿ ತೊಟ್ಟಿಲು ಸಾಗಿದರೆ ಇನ್ನೊಂದು ವಾಹನದಲ್ಲಿ ಬಸವಣ್ಣನವರ ಮೂರ್ತಿ ಇಡಲಾಗಿತ್ತು. ಅಲ್ಲದೆ ಬಸವಣ್ಣ, ಅಕ್ಕ ಮಹಾದೇವಿ ಅಲ್ಲಮ ಸೇರಿದಂತೆ ವಿವಿಧ ಬಸವಾದಿ ಶರಣರ ವೇಷಧಾರಿಗಳ ಗಮನ ಸೆಳೆದವು.
ಮೆರವಣಿಗೆಯಲ್ಲಿ ಭಾಗವಹಿಸಿದ ಯುವಕರು ಝಾಂಜಾ ಕಥಕ ಮುಂದೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಪಾರಂಪರಿಕ ಲಂಬಾಣಿ ಮಹಿಳೆಯರು ನೃತ್ಯ ಮಾಡಿ ನೆರೆದ ಜನರ ಗಮನ ಸೆಳೆದರು. ಮೆರವಣಿಗೆಯಲ್ಲಿ ಡೊಳ್ಳು, ಭಾಜಾ ಭಜಂತ್ರಿಯ ತಂಡಗಳು ಭಾಗವಹಿಸಿ ಮೆರಗು ಹೆಚ್ಚಿಸಿದರು. ಮಾರ್ಗಮಧ್ಯೆ ಅಲ್ಲಲ್ಲಿ ಮಜ್ಜಿಗೆ ವಿತರಿಸಲಾಯಿತು. ಭವಾನಿ ದೇವಸ್ಥಾನದ ಮುಂಭಾಗದಲ್ಲಿ ಸೋಹಂ ಅಂಗಡಿಯ ಮಾಲೀಕ ಕಲ್ಯಾಣರಾಯ ಶಿವಣಕರ ಅವರಿಂದ ಪ್ರಸಾದ (ಟಿಫನ್) ವ್ಯವಸ್ಥೆ ಕಲ್ಪಿಸಲಾಗಿತ್ತು.
ಶಾಸಕ ಶರಣು ಸಲಗರ ಅವರು ಪರುಷ ಕಟ್ಟೆಗೆ ಆಗಮಿಸಿ ಪೂಜೆ ಸಲ್ಲಿಸಿ ತೆರಳಿದರು. ಮೆರವಣಿಗೆಯ ಮಧ್ಯದಲ್ಲಿ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಮೂರ್ತಿಗೆ ಮಾಲಾರ್ಪಣೆ ಮಾಡಿ ಹುಲಸೂರನ ಡಾ. ಶಿವಾನಂದ ಮಹಾಸ್ವಾಮೀಜಿ, ಅಕ್ಕ ಅನ್ನಪೂರ್ಣ ತಾಯಿ, ಡಾ. ಗಂಗಾಂಬಿಕಾ ಅಕ್ಕ ಮಾತನಾಡಿದರು. ಪ್ರಭು ದೇವರು ಉಪಸ್ಥಿತರಿದ್ದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿವಿಸಿ ಉಪಾಧ್ಯಕ್ಷ ಡಾ. ಜಿ.ಎಸ್ ಭುರಾಳೆ, ಕಾರ್ಯದರ್ಶಿ ನಾಗಯ್ಯಾ ಸ್ವಾಮಿ,ಕೋಶಾಧ್ಯಕ್ಷ ಶಿವರಾಜ ಶಾಶೆಟ್ಟೆ, ವಿಶ್ವಸ್ಥರಾದ ಗದಗೆಪ್ಪಾ ಹಲಶೆಟ್ಟೆ, ಸೋಮಶೇಖರಯ್ಯ ವಸ್ತ್ರದ,ಮಲ್ಲಿಕಾರ್ಜುನ ಮಂಠಾಳೆ ಹಾಗೂ ಬಿಡಿಪಿಸಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ,ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ಶ್ರೀಕಾಂತ ಬಡದಳೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ವೀರಣ್ಣ ಹಲಶೆಟ್ಟೆ, ಸುಭಾಷ ಹೊಳಕುಂದೆ,ಮಲ್ಲಯ್ಯ ಹಿರೇಮಠ,ಅಶೋಕ ನಾಗರಾಳೆ,ಕಾಶೆಪ್ಪಾ ಸಕ್ಕರಭಾವಿ, ಜಗನ್ನಥ ಖೂಬಾ,ಭದ್ರಿನಾಥ ಪಾಟೀಲ,ಅನೀಲಕುಮಾರ ರಗಟೆ,ರೇವಣಪ್ಪ ರಾಯವಾಡೆ ಉಪಸ್ಥಿತರಿದ್ದರು.
ಪ್ರಮುಖರಾದ ಮಾಜಿ ಶಾಸಕ ಎಂ.ಜಿ ಮುಳೆ, ಕಾಂಗ್ರೇಸ್ ಅಭ್ಯರ್ಥಿ ವಿಜಯಸಿಂಗ್, ಮಾಲಾ ಬಿ. ನಾರಾಯಣರಾವ, ಆನಂದ ದೇವಪ್ಪಾ, ಶಿವರಾಜ ನರಶೆಟ್ಟೆ, ಪ್ರದೀಪ ವಾತಾಡೆ, ವಿಜಯಕುಮಾರ ಮಂಠಾಳೆ, ಜಿ. ಆರ್.ಪಾಟೀಲ, ರವಿ ಕೊಳಕೂರ, ಶಿವಕುಮಾರ ಬಿರಾದಾರ ಜಗನ್ನಾಥ ಪಾಟೀಲ, ಮಹೇಶ ಸುಂಟನೂರೆ, ಡಾ. ಪ್ರಥ್ವಿರಾಜ ಬಿರಾದಾರ, ಶರಣಪ್ಪ ಪರೆಪ್ಪಾ ಸೇರಿದಂತೆ ಬಿಡಿಪಿಸಿ ಹಾಗೂ ಬಿಡಿವಿಸಿ ಪದಾಧಿಕಾರಿಗಳು, ಅನೇಕ ಗಣ್ಯರು, ಸಂಘ-ಸಂಸ್ಥೆಯ ಪ್ರಮುಖರು ಭಾಗವಹಿಸಿದರು.
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಪ್ರಪ್ರಥಮವಾಗಿ ಸಮಾನತೆಯ ಧರ್ಮ ಬಿತ್ತಿ, ಕಾಯಕ, ದಾಸೋಹಕ್ಕೆ ಆದ್ಯತೆ ನೀಡಿ ಹೊಸ ಧರ್ಮ ನೀಡಿದ ಪುಣ್ಯ ಭೂಮಿಯಲ್ಲಿಯೇ ಬಸವ ಜಯಂತಿ ಆಚರಿಸಲಾಗುತ್ತಿದೆ. ಬಸವಣ್ಣ, ಬಸವ ತತ್ವ, ವಚನ ತತ್ವ ಮೇಲೆ ನಂಬಿಕೆ, ಭರವಸೆ ಇಟ್ಟು ಸಾಗಬೇಕು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಅಂದಾಗ ಜೀವನ ಸಾರ್ಥಕವಾಗಲು ಸಾಧ್ಯ, ವಚನ ಸಾಹಿತ್ಯ ವಿಶ್ವದಾದ್ಯಂತ ಪಸರಿಸಬೇಕು, ಪ್ರತಿ ವರ್ಷ ಸರಕಾರ ಶರಣರ ಕಾಯಕ ಭೂಮಿ ಬಸವಕಲ್ಯಾಣಕ್ಕೆ ಬಂದು ಬಸವ ಜಯಂತಿ ಆಚರಿಸಿ ಗೌರವ ಸಲ್ಲಿಸಬೇಕು.
ಡಾ. ಶಿವಾನಂದ ಮಹಾಸ್ವಾಮೀಜಿ ಹುಲಸೂರ
ಜಗತ್ತಿಗೆ ಮಾನವೀಯ ಮೌಲ್ಯ ಭೋಧಿಸಿದ ನಾಡು ಬಸವಕಲ್ಯಾಣ, ಬಸವಣ್ಣನವರ ಕಾಯಕ ಬೂಮಿಯಲ್ಲಿ ನಾವು ಹುಟ್ಟಿದ್ದು ನಮ್ಮ ಪೂರ್ವ ಜನ್ಮದ ಪುಣ್ಯ, ಬಸವಣ್ಣನವರು ಸೇರಿದಂತೆ ಮಹಾತ್ಮರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ ಇಡೀ ಜಗತ್ತಿಗೆ ಸಮಾನರು ಶರಣರು ನೀಡಿದ ತತ್ವದ ಮೇಲೆ ನಂಬಿಕೆ ಇಟ್ಟು ಸಾಗಬೇಕು
ಅಕ್ಕ ಅನ್ನಪೂರ್ಣ ತಾಯಿ
ಶರಣರು ಕಾಯಕ, ದಾಸೋಹಕ್ಕೆ ಮೊದಲಾದ್ಯತೆ ನೀಡಿ ಮೂಡ ನಂಬಿಕೆ ವಿರುದ್ದ ಹೋರಾಡಿದರು. ಅವರು ಮನುಕುಲದ ಉದ್ದಾರಕ್ಕಾಗಿ ಶ್ರಮಿಸಿದರು. ವಚನ ಸಾಹಿತ್ಯ ರಚಿಸಿ ಮಾನವೀಯ ಮೌಲ್ಯಗಳು ನೀಡಿದ್ದಾರೆ. ಅಂತಹ ಮಾನವೀಯ ಮೌಲ್ಯಗಳು ಅರ್ಥ ಮಾಡಿಕೊಂಡು ಸಾಗಬೇಕು
ಡಾ. ಗಂಗಾಂಬಿಕಾ ಅಕ್ಕ