ಸರಕಾರಿ ಶಾಲೆಯ ಶಿಕ್ಷಕರು ಬುದ್ಧಿವಂತರು : ಎಂಎಲ್ಸಿ ಪಾಟೀಲ್

ಔರಾದ್ : ಡಿ.10:ಸರಕಾರಿ ಶಾಲೆಯ ಶಿಕ್ಷಕರು ಸಿಇಟಿ ಪರೀಕ್ಷೆ ಬರೆದು ಕೆಲಸಕ್ಕೆ ಸೇರ್ಪಡೆಯಾಗುತ್ತಾರೆ. ಅವರುಗಳು ಮನಸ್ಸು ಮಾಡಿದರೇ ಏನು ಬೇಕಾದರೂ ಮಾಡಬಹುದು ಎಂದು ಎಂಎಲ್ಸಿ ಚಂದ್ರಶೇಖರ್ ಪಾಟೀಲ್ ಹೇಳಿದರು.

ತಾಲೂಕಿನ ಸಂತಪೂರ ಗ್ರಾಮದ ಭಾರತ ಕಲ್ಯಾಣ ಮಂಟಪದಲ್ಲಿ ಶನಿವಾರ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ, ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಆಡಳಿತ ಮಂಡಳಿ ಸಂಘ ಸಂಯುಕ್ತವಾಗಿ ಆಯೋಜಿಸಿದ್ದ ಪರೀಕ್ಷಾ ಪಾವಿತ್ರತೆ ಹಾಗೂ ವ್ಯಕ್ತಿತ್ವ ವಿಕಸನ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಕಟ್ಟಪಟ್ಟು ವ್ಯಾಸಂಗ ಮಾಡಿದರೇ ಯಶಸ್ಸು ಸಾಧಿಸಬಹುದು. ಇದಕ್ಕೆ ಪೂರಕವಾಗಿ ಶಿಕ್ಷಕರು ಶ್ರಮಪಟ್ಟಾಗ ಮಾತ್ರ ವಿದ್ಯಾರ್ಥಿಗಳು ಸಾಧಿಸಲು ಸುಲಭವಾಗುತ್ತದೆ ಎಂದು ತಿಳಿಸಿದರು.

ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಸರಕಾರ ಒಂದೊಂದಾಗಿ ಬಗೆಹರಿಸುತ್ತದೆ ಎಂದು ಭರವಸೆ ನೀಡಿದರು. ಶಿಕ್ಷಕರು ಸಮಸ್ಯೆಗಳಿದ್ದರೆ ನೇರವಾಗಿ ಸಂಪರ್ಕಿಸುವಂತೆ ತಿಳಿಸಿದರು.

ಧಾರವಾಡನ ಖ್ಯಾತ ಮೊಟಿವೇಶನಲ್ ಸ್ಪೀಕರ್ ಡಾ. ಮಹೇಶ ಮಾಶಾಳ ಮಾತನಾಡಿ, ಶಿಕ್ಷಕರು ಮಕ್ಕಳ ನೆಚ್ಚಿನ ಶಿಕ್ಷಕರಾಗಬೇಕಾದರೇ ಅವರೊಂದಿಗೆ ಉತ್ತಮ ಬಾಂಧವ್ಯ ಬೆಳಸಿಕೊಳ್ಳಬೇಕು. ಆಧುನಿಕ ಜಗತ್ತಿಗೆ ಅನುಗುಣವಾಗಿ ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ಸಲಹೆ ನೀಡಿದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡದೇ ಎಷ್ಟು ಪ್ರಶಸ್ತಿಗಳು ಪಡೆದರು ವ್ಯರ್ಥ ಎಂದರು. ಶಿಕ್ಷಕರು ವೃತ್ತಿ ಅತ್ಯಂತ ಪವಿತ್ರವಾದದ್ದು, ಹುದ್ದೆಗಾಗಿ ವೃತ್ತಿ ನಿಭಾಯಿಸದೇ ಮಕ್ಕಳ ಏಳಿಗೆಗಾಗಿ ಬೋಧನೆ ಮಾಡಬೇಕು. ಮಕ್ಕಳ ಸಬಲೀಕರಣಕ್ಕೆ ಶಿಕ್ಷಕರಿಗೆ ಸಿಕ್ಕಿರುವ ವೃತ್ತಿಯನ್ನು ಅವಕಾಶವೆಂದು ಭಾವಿಸಿಕೊಂಡು ಬೋಧಿಸಬೇಕು ಎಂದು ಕಿವಿಮಾತು ಹೇಳಿದರು. ಮೊಬೈಲ್ ಸಹವಾಸಕ್ಕಿಂತ ಮಕ್ಕಳಿಗೆ ಪುಸ್ತಕ ಸಹವಾಸ ಬೆಳೆಸುವದರಿಂದ ಮಕ್ಕಳಲ್ಲಿ ಶಬ್ಧಕೋಶ ಹೆಚ್ಚಾಗುತ್ತದೆ. ಇದರಿಂದ ಓದು ಮತ್ತು ತಿಳಿವಳಿಕೆಗೆ ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಡಿಡಿಪಿಐ ಸಲೀಂ ಪಾಶಾ, ಬಿಇಒ ಮಹ್ಮದ್ ಮಕ್ಸೂದ್, ಸೈಯದ್ ಫುರಖಾನ ಪಾಶಾ ಮಾತನಾಡಿದರು. ಈ ವೇಳೆ ಪ್ರಮುಖರಾದ ಲಕ್ಷ್ಮಣ ತುರೆ, ಪ್ರಕಾಶ ರಾಠೋಡ್, ಮೈಬೂಬು ಪಟೇಲ್, ಕೃಷ್ಣರಡ್ಡಿ, ಮಹಾದೇವ ಚಿಟಗೀರೆ, ಈಶ್ವರ ಕ್ಯಾದೆ, ಸೂರ್ಯಕಾಂತ ಬಿರಾದಾರ್, ಸಂಜೀವ ಶೆಟಕಾರ, ರಾಮರಾವ ರಾಠೋಡ್, ಮಹಾದೇವ ಲಾಂಚಕರ್ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ಶಿಕ್ಷಕರು ಪಾಲ್ಗೊಂಡರು. ಗುರುನಾಥ ದೇಶಮುಖ ಪ್ರಾಸ್ತಾವಿಕ ಮಾತನಾಡಿದರು. ಜಗದೇವಿ ಜಾಂತೇಕರ್ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ರಾಜಕುಮಾರ ಡೋಂಗ್ರೆ ಸ್ವಾಗತಿಸಿದರು. ವಿಶ್ವನಾಥ ಬಿರಾದಾರ್ ನಿರೂಪಿಸಿದರು. ಕೃಷ್ಣ ಪಾಟೀಲ್ ವಂದಿಸಿದರು. ಜ್ಞಾನ ಭಾರತಿ ಶಾಲೆಯ ಮಕ್ಕಳಿಂದ ನಡೆದ ನೃತ್ಯಗಳು ಎಲ್ಲರ ಗಮನ ಸೆಳೆಯಿತು.


ಶಿಕ್ಷಕರಿಂದ ರಾಜಕೀಯ ಬೇಡ

ಶಿಕ್ಷಕರು ಸಮಾಜ ನಿರ್ಮಾಣ ಮಾಡುವ ಶಕ್ತಿ ಹೊಂದಿದ್ದಾರೆ. ಮಧ್ಯೆ ಶಿಕ್ಷಕರು ರಾಜಕೀಯ ಮಾಡುತ್ತಿರುವ ಸಂಗತಿ ಹೆಚ್ಚಾಗಿದೆ ಅವರು ರಾಜಕೀಯ ಮಾಡಬಾರದು ಎಂದು ಮೊಟಿವೇಶನಲ್ ಸ್ಪೀಕರ್ ಡಾ. ಮಹೇಶ ಮಾಶಾಳ ಹೇಳಿದರು. ಶಿಕ್ಷಣದಲ್ಲಿ ಮೇಲು, ಕೀಳು ಜಾತಿ ಬೇಧ ಸಲ್ಲದು. ಶಿಕ್ಷಕ ವೃತ್ತಿ ಪವಿತ್ರವಾದುದ್ದು, ಆದ್ದರಿಂದ ಅದಕ್ಕೆ ಕಳಂಕ ತರದಂತೆ ಕರ್ತವ್ಯ ನಿಭಾಯಿಸಬೇಕು, ಶಿಕ್ಷಕರು ರಾಜಕೀಯದಿಂದ ದೂರ ಉಳಿಯುವಂತೆ ಎಂದು ಸಲಹೆ ನೀಡಿದರು.