ಮಾನ್ವಿ,ಮಾ.೨೪- ಸರಕಾರಿ ಬಾಲಕರ ಪ್ರೌಢಶಾಲೆಗೆ ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಅಪರ್ಣರವರು ಭೇಟಿ ನೀಡಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಮನಿಯವರಿಂದ ಶಾಲೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿ ಸರಕಾರವು ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮವಾದ ಶಿಕ್ಷಣ ದೊರೆಯಲಿ ಎನ್ನುವ ಉದ್ದೇಶದಿಂದ ಶಾಲಾ ಗ್ರಂಥಾಲಯದಲ್ಲಿ ಪುಸ್ತಗಳ ಸೌಲಭ್ಯ, ಗಣಕ ಯಂತ್ರಗಳ ಲ್ಯಾಬ್ ವ್ಯವಸ್ಥೆ, ವಿಜ್ಞಾನ ಪ್ರಯೋಗಲಾಯ, ಕ್ರೀಡಾ ಸಮಾಗ್ರಿಗಳ ಸೌಲಭ್ಯ ನೀಡಿದ್ದು, ಅವುಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದಕ್ಕೆ ಅಗತ್ಯವಾದ ಕ್ರಮವನ್ನು ಕೈಗೊಳ್ಳುವಂತೆ ಸೂಚಿಸಿದರು.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲನೆ ಮಾಡಿದ ಅವರು ಅಕ್ಷರ ದಾಸೋಹದ ಅಡುಗೆ ಕೋಣೆಯನ್ನು ವೀಕ್ಷಿಸಿ ಅಡುಗೆ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ, ಅಡುಗೆ ಮಾಡುವಾಗ ಜಾಗ್ರತೆ ವಹಿಸುವಂತೆ ಅಡುಗೆ ತಯಾರಕರಿಗೆ ಸೂಚಿಸಿದರು.
ಶಾಲೆಯ ಮಕ್ಕಳಲ್ಲಿ ಓದುವ ಸಾಮರ್ಥ್ಯವನ್ನು ಹೆಚ್ಚಿಸಿ, ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಲು ಅಗತ್ಯವಾದ ಶಿಕ್ಷಣ ಪದ್ದತಿಗಳನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಕರಿಗೆ ತಿಳಿಸಿದರು. ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದರು.
೨೦೨೩ ರ ಚುನಾವಣೆಯ ನಿರ್ವಹಣೆಗಾಗಿ ಶಾಲೆಗಳಲ್ಲಿ ಇರುವ ಸೌಲಭ್ಯಗಳ ಬಗ್ಗೆ ಚರ್ಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಮನಿ, ಇ.ಸಿ.ಓ. ಮಹೇಶ್, ಸಿ.ಆರ್.ಪಿ, ಆಶಾ ಶಾಲೆಯ ಮುಖ್ಯಗುರುಗಳಾದ ಅಜ್ಜನಗೌಡ ಹಾಗೂ ಶಾಲೆಯ ಶಿಕ್ಷಕರು ಅಗತ್ಯ ಮಾಹಿತಿಯನ್ನು ನೀಡಿದರು.