ಸರಕಾರಿ ಶಾಲೆಗಳಿಗೆ ಸಮುದಾಯದ ಸಹಭಾಗೀತ್ವ ಅವಶ್ಯ : ಬುರಡಿ

ಗದಗ, ಜ. 9: ಶಾಲೆ ಹಾಗೂ ಸಮುದಾಯ ಎಂಬುದು ಒಂದೇ ನಾಣ್ಯದ ಎರಡು ಮುಖಗಳು. ಸರಕಾರಿ ಶಾಲೆಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸುವ, ಸಮರ್ಪಕ ದೃಷ್ಠಿಯಿಂದ ಸಮುದಾಯದ ಸಹಭಾಗೀತ್ವವನ್ನು ಪಡೆದು ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಬೇಕೆಂದು ಗದಗ ಶಹರ ಬಿಇಓ ಆರ್.ಎಸ್.ಬುರಡಿ ಹೇಳಿದರು.
ಗದುಗಿನ ಗಂಗಿಮಡಿಯ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ 219 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಗದುಗಿನ ಕಾರ್ಮಿಕ ಕಲ್ಯಾಣ ಸಂಸ್ಥೆಯು ನೀಡಿದ ಟೈ-ಬೆಲ್ಟಗಳನ್ನು ವಿತರಿಸಿ ಮಾತನಾಡಿದ ಅವರು ಸರಕಾರಿ ಶಾಲೆಗಳ ಅಭಿವೃದ್ಧಿಗೆ ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕು ಎಂದರು.
ಸರಕಾರಿ ಶಾಲೆಗಳ ಯಶಸ್ಸು ಪೋಷಕ, ಪಾಲಕ, ಶಿಕ್ಷಕ ಬಳಗ ನೇರವಾಗಿ ಪಾಲ್ಗೋಳ್ಳುವಿಕೆ ಹಾಗೂ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಮುದಾಯದ ಸಹಭಾಗೀತ್ವ ಸಹಕಾರ ಅವಶ್ಯವಾಗಿದೆ. ಶಾಲೆಯ ಮೂಲಭೂತ ಸೌಕರ್ಯಗಳ, ಅವಶ್ಯಕತೆಗಳನ್ನು ಶಿಕ್ಷಕರು ಸಮುದಾಯದ ಗಮನಕ್ಕೆ ತರುವಲ್ಲಿ ಮುಂದಾಗಬೇಕು ಅಂದಾಗ ದಾನಿಗಳು ಒಟ್ಟಾಗಿ ಆ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂದಾಗುತ್ತಾರೆ. ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು ಮಕ್ಕಳಿಗೆ ಟೈ ಬೆಲ್ಟ್ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗದುಗಿನ ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಹ್ಮದ್‍ಇರ್ಫಾನ್ ಡಂಬಳ ಮಾತನಾಡಿ ಸರಕಾರಿ ಶಾಲೆಗಳ ಮಕ್ಕಳು ಬದುಕಿನ ಪಾಠ ಓದಿ ತಿಳಿದವರು. ಕೃಷಿಕರ, ಕಾರ್ಮಿಕರ ಮಕ್ಕಳೇ ಹೆಚ್ಚಾಗಿರುವ ಸರಕಾರಿ ಶಾಲೆಗಳಲ್ಲಿ ಕಲಿತ ಮಕ್ಕಳು ಪ್ರತಿಭಾನ್ವಿತರಾಗಿದ್ದಾರೆ ನಮ್ಮ ಸಂಘಟನೆ ಸದಾ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಕೈ ಜೋಡಿಸಲಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ವಾಯರ್‍ಮನ್ ಕಾರ್ಮಿಕರ ಸಂಘದ ಅಧ್ಯಕ್ಷ ನಾಶೀರ್ ಚಿಕೇನಕೊಪ್ಪ ಮಾತನಾಡಿ ಕಾರ್ಮಿಕರ ಸಂಘಟನೆಯು ದುಡಿಮೆಯ ಜೊತೆಗೆ ಸಮಾಜಮುಖಿಯಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ವಿಠ್ಠಲ ಸಫಾರೆ, ಸರಕಾರ ಮಕ್ಕಳಿಗಾಗಿ ನೀಡುವ ವಿವಿದ ಸೌಲಭ್ಯಗಳನ್ನು ಈಗಾಗಲೇ ಮಕ್ಕಳಿಗೆ ತಲುಪಿಸಲಾಗಿದೆ. ಶಾಲೆಯ ಅಭಿವೃದ್ಧಿಗಾಗಿ ಎಸ್‍ಡಿಎಂಸಿ ಯು ಸದಾ ಶಾಲೆಯ ಶಿಕ್ಷಕ ಬಳಗದೊಂದಿಗೆ ಕೈ ಜೋಡಿಸಿದೆ ಎಂದರು.