ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ

ಕೋಲಾರ,ಜು,೧೧-ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮೀಸಗಾನಹಳ್ಳಿಯ ಶ್ರೀನಿವಾಸ್ ಯಾದವ್ ಶ್ರೀನಿವಾಸಪುರ ಕಸಬಾ ಹೋಬಳಿಯ ಆರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು.
ಶ್ರೀನಿವಾಸಪುರ ಕಸಬಾ ವ್ಯಾಪ್ತಿಗೆ ಬರುವ ದಳಸನೂರು, ಚಲ್ದಿಗಾನಹಳ್ಳಿ, ನಂಬಿಗಾನಹಳ್ಳಿ, ಮಾಸ್ತೇನಹಳ್ಳಿ,, ಜೆ.ತಿಮ್ಮಸಂದ್ರ ಹಾಗೂ ಪುಲಗೂರಕೋಟೆಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರಕಾರಿ ಶಾಲೆಗಳ ಸುಮಾರು ನಾಲ್ಕು ಸಾವಿರ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕು, ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು, ಬಡತನ ಕಾರಣದಿಂದ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಕಾರಣದಿಂದ ತಾವು ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಂಚುತ್ತಿರುವುದಾಗಿ ಅವರು ವಿವರಿಸಿದರು.
ಆಯಾ ಪಂಚಾಯ್ತಿ ವ್ಯಾಪ್ತಿಯ ಶಾಲೆಗಳಲ್ಲಿಯೇ ಕಳೆದ ಒಂದು ವಾರದಿಂದಲೂ ನಡೆದ ಕಾರ್ಯಕ್ರಮಗಳಲ್ಲಿ ಈ ಪುಸ್ತಕ ವಿತರಣೆ ಮಾಡಲಾಯಿತು. ಪ್ರತಿ ಗ್ರಾಮದಲ್ಲಿಯೂ ನಡೆದ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಆಯಾ ಗ್ರಾಮಗಳ ಮುಖಂಡರು ಮತ್ತು ಶಾಲಾ ಮುಖ್ಯಸ್ಥರು ಉಪಸ್ಥಿತರಿದ್ದರು.