
ರಾಯಚೂರು,ಸೆ.೦೨- ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಕ್ಷಾಬಂಧನದ ಸಂಭ್ರಮೋತ್ಸವದ ಅಂಗವಾಗಿ ವನಸಿರಿ ಪ್ರತಿಷ್ಠಾನ ಮತ್ತು ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ’ವೃಕ್ಷಾಬಂಧನ’ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾಲೇಜಿನ ಆವರಣದಲ್ಲಿ ಸಸಿಗಳನ್ನು ನೆಟ್ಟು ರಾಖಿಗಳನ್ನು ಕಟ್ಟಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಸಸಿಗಳಿಗೆ ಪೂಜೆಸಲ್ಲಿಸಿ ರಕ್ಷಾಬಂಧನ ಕಟ್ಟುವ ಮೂಲಕ ಸಾಂಪ್ರದಾಯಿಕ ಸಂಭ್ರಮದೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ಸುಗುಣಾ ಬಸವರಾಜ ರಕ್ಷಾಬಂಧನದ ಇಂದಿನ ಪವಿತ್ರ ದಿನದಂದು ಕಾಲೇಜಿನಲ್ಲಿ ವೃಕ್ಷಾ ಬಂಧನ ಕಾರ್ಯಕ್ರಮ ಆಯೋಜಿಸಿದ್ದು ನಿಜಕ್ಕೂ ಒಂದು ವಿಶಿಷ್ಟ ಹಾಗೂ ವಿಭಿನ್ನ ಆಚರಣೆ. ಇಂಥ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಸ್ಯ ಸಂಪತ್ತನ್ನು ಬೆಳೆಸುವ ಮತ್ತು ಸಂರಕ್ಷಿಸುವ ಪ್ರಜ್ಞೆಯನ್ನು ಮೂಡಿಸುತ್ತಿರುವ ವನಸಿರಿ ಪ್ರತಿಷ್ಠಾನದ ಪ್ರಯತ್ನ ಅನನ್ಯವಾದುದು. ಕಾಲೇಜಿನ ಎನ್ ಎಸ್ ಎಸ್ ಘಟಕವೂ ಸಹ ಅರಣ್ಯ ಸಂಪತ್ತು ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಸಸಿ ನೆಡುವ ಹಾಗೂ ಬೀಜದುಂಡೆಗಳನ್ನು ಎಸೆಯುವಂತಹ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವೃಕ್ಷಾ ಬಂಧನ ವಿನೂತನ ಕಾರ್ಯಕ್ರಮವಾಗಿದ್ದು ನಮ್ಮ ಕಾಲೇಜಿನಲ್ಲಿ ಆಚರಿಸಿದುದು ಸಂತಸ ತಂದಿದೆ ಎಂದರು.
ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಶ್ರೀ ಬೀರಪ್ಪ ಎಮ್ ಜೆ ಮಾತನಾಡಿ ನಾಗರಿಕರು ಕೇವಲ ಸಾಂವಿಧಾನಿಕ ಹಕ್ಕುಗಳನ್ನು ಅನುಭವಿಸಿದರೆ ಸಾಲದು, ಅದಕ್ಕೆ ಪ್ರತಿಯಾಗಿ ಕರ್ತವ್ಯಗಳನ್ನೂ ನಿರ್ವಹಿಸಬೇಕು. ಒಬ್ಬರು ನಿರ್ವಹಿಸುವ ಕರ್ತವ್ಯಗಳು ಇತರರಿಗೆ ಹಕ್ಕುಗಳಾಗಿ ಅನುಭವಕ್ಕೆ ಲಭ್ಯವಾಗುತ್ತವೆ. ವಿಶೇಷವಾಗಿ ನಾವೆಲ್ಲರೂ ಪರಿಸರ ವೃದ್ಧಿ ಹಾಗೂ ಸಂರಕ್ಷಣೆಯ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುವ ಮೂಲಕ ಪರಿಸರದೊಂದಿಗಿರುವ ನಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸಬೇಕಿದೆ ಎಂದರು.
ಉಪ ವಲಯ ಅರಣ್ಯಾಧಿಕಾರಿ ಶ್ರೀ ರಾಜಶೇಖರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಭಾರತೀಯ ಹಬ್ಬಗಳು ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯವನ್ನು ಬೆಸೆಯುವ ಪವಿತ್ರ ಆಚರಣೆಗಳಾಗಿವೆ. ರಕ್ಷಾ ಬಂಧನದ ಬಾಂಧವ್ಯವು ಈ ಕಾರ್ಯಕ್ರಮದ ಮೂಲಕ ವೃಕ್ಷಾ ಬಂಧನವಾಗಿ ನವ ರೂಪ ಪಡೆದಿದ್ದು ಗಿಡಮರಗಳೊಂದಿಗೆ ಎಲ್ಲರನ್ನೂ ಭಾವನಾತ್ಮಕವಾಗಿ ಬೆಸೆದಿದೆ. ಪರಿಸರದೊಂದಿಗೆ ಪ್ರೀತಿಯಿಂದ, ಕಳಕಳಿಯಿಂದ ಬದುಕುವ ಜವಾಬ್ದಾರಿ ಎಲ್ಲರದಾಗಬೇಕು ಎಂದು ಸಂದೇಶ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ಕಾರ್ಯಕ್ರಮದ ಉದ್ದೇಶವನ್ನು ಕುರಿತು ಮಾತನಾಡಿ ಸಸ್ಯ ಸಂಪತ್ತು ಮತ್ತು ಅರಣ್ಯ ವೃದ್ಧಿ ಮತ್ತು ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದ್ದು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸುವ ಹಾಗೂ ಸಂರಕ್ಷಿಸುವ ಕಾರ್ಯವನ್ನು ಮಾಡಬೇಕಿದೆ. ವೃಕ್ಷಾ ಬಂಧನ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಎಲ್ಲರನ್ನೂ ಸಸಿಗಳೊಂದಿಗೆ ಭಾವನಾತ್ಮಕ ಬಾಂಧವ್ಯ ಬೆಸೆಯುವಂತೆ ಮಾಡಿದ ಮತ್ತು ಕಾರ್ಯಕ್ರಮದ ಆಯೋಜನೆಗೆ ಸಹಭಾಗಿತ್ವ ನೀಡಿದ ವನಸಿರಿ ಪ್ರತಿಷ್ಠಾನದ ಅಧ್ಯಕ್ಷ ಶ್ರೀ ಅಮರೇಗೌಡ ಮಲ್ಲಾಪುರ ಸೇರಿದಂತೆ ಎಲ್ಲ ಪದಾಧಿಕಾರಿಗಳಿಗೂ ಹಾಗೂ ಅರಣ್ಯ ಇಲಾಖೆಯ ಎಲ್ಲ ಅಧಿಕಾರಿಗಳಿಗೂ ಧನ್ಯವಾದಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸ್ವಯಂ ಸೇವಕಿಯರಾದ ಮಮತಾ, ಜ್ಯೋತಿ, ಹುಸೇನಮ್ಮ, ದೀಪಾ, ಅನ್ನಪೂರ್ಣೇಶ್ವರಿ ಹಾಗೂ ಸಂಗೀತಾ ಇವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಅರುಣ್ ಕುಮಾರ ಹೊಸಮನಿ, ದೊಡ್ಡನಗೌಡ, ಕೃಷಿ ವಿಜ್ಜಾನಿಗಳು, ಡಾ.ಮಲ್ಲನಗೌಡ, ಕೃಷಿ ಅಧಿಕಾರಿಗಳು, ಶ್ರೀ ರಾಜಪ್ಪ, ಪರಿಸರ ಮಾಲಿನ್ಯ ಅಧಿಕಾರಿಗಳು, ಶ್ರೀ ಶಂಕರಗೌಡ, ಗೌರವ ಅದ್ಯಕ್ಷರು, ವನಸಿರಿ ಫೌಂಡೇಶನ್, ಶ್ರೀ ಬೀರಪ್ಪ, ಮಾಜಿ ಅರಣ್ಯ ಅಧಿಕಾರಿಗಳು, ಶ್ರೀ ಶಂಕರಗೌಡ ಎಲೆಕೂಡ್ಲಿಗಿ, ಅಮರಯ್ಯ ಪತ್ರಿಮಠ, ಅನಿತಾ ಬಸವರಾಜ, ರೈತ ಮಹಿಳೆ ಜಿಲ್ಲಾದ್ಯಕ್ಷರು, ಶ್ರೀ ಚನಪ್ಪ ಕೆ.ಹೊಸಹಳ್ಳಿ, ನಾಗರಾಜ, ರಂಜಾನ್ ಸಾಬ್, ಚಂದ್ರು ಪವಾಡ ಶೆಟ್ಟಿ, ಮಹಾಂತೇಶ ಉಪ್ಪಾರ, ಮರಿಸ್ವಾಮಿ, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಪ್ರಸನ್ನಕುಮಾರ್, ಡಾ. ಸಯಿದಾ ರಶಿದಾ ಪರ್ವೀನ್, ಡಾ. ಜ್ಯೋತಿ ಸಿ ಕೆ, ಪ್ರೊ. ಉಮಾದೇವಿ, ಪ್ರೊ. ರಂಗನಾಥ, ಡಾ. ಸುರೇಶ್, ಪ್ರೊ. ಸುಮಿತ್ರಾ ಸೇರಿದಂತೆ ಎಲ್ಲ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.