ಸರಕಾರಿ ಮಹಿಳಾ ಕಾಲೇಜಿನಲ್ಲಿ ಫಿಟ್ ಇಂಡಿಯಾ ಕಾರ್ಯಕ್ರಮ

ರಾಯಚೂರು,ಆ.೩೦-ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಇಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ “ಫಿಟ್ ಇಂಡಿಯಾ” ಕಾರ್ಯಕ್ರಮದ ಅಡಿಯಲ್ಲಿ ಯುವಜನತೆಗಾಗಿ ಪ್ರತಿಜ್ಞಾವಿಧಿ ಬೋಧನಾ ಸಮಾರಂಭವನ್ನು ಹಮ್ಮಿಕೊಂಡಿತ್ತು.
ಹಾಕಿ ಮಾಂತ್ರಿಕ, ಕ್ರೀಡಾ ಲೋಕದ ದಂತಕಥೆ, ಭಾರತದ ಕ್ರೀಡಾ ಇತಿಹಾಸದಲ್ಲಿ ಸ್ವರ್ಣ ಯುಗ ಬರೆದ ಮೇಜರ್ ಧ್ಯಾನ್ ಚಂದ್ ರವರ ಜನ್ಮದಿನೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರನ್ನುದ್ದೇಶಿಸಿ ಮಾತನಾಡಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರಸನ್ನಕುಮಾರ್, ೧೯೨೮, ೧೯೩೨ ಹಾಗೂ ೧೯೩೬ ರಲ್ಲಿ ಒಲಂಪಿಕ್ ಕ್ರೀಡೆಗಳಲ್ಲಿ ವಿಜಯ ಸಾಧಿಸುವ ಮೂಲಕ ಭಾರತಕ್ಕೆ ಸ್ವರ್ಣ ಪದಕ ತಂದ ಕೀರ್ತಿ ಮೇಜರ್ ಧ್ಯಾನ್ ಚಂದ್ ರವರದು. ಬ್ರಿಟಿಷ್ ಪ್ರಾಬಲ್ಯದ ದಿನಗಳಲ್ಲಿ ಮಾಡಲಾದ ಈ ಸಾಧನೆ ಭಾರತದ ಕ್ರೀಡಾ ಇತಿಹಾಸದಲ್ಲಿ ಸುವರ್ಣಯುಗವೇ ಸರಿ. ಧ್ಯಾನ್ ಚಂದ್ ರವರೊಂದಿಗೆ ಭಾರತದ ಕ್ರೀಡಾ ಲೋಕದ ದಿಗ್ಗಜ ಕ್ರೀಡಾ ಪಟುಗಳನ್ನೂ ಸಹ ನೆನೆದು ಗೌರವಿಸುವ ದಿನ ಇಂದು ಎಂದು ಹೇಳಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಪುಷ್ಪ ಕ್ರೀಡೆಗಳು ವ್ಯಕ್ತಿಯ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವುದರೊಂದಿಗೆ ಶಿಸ್ತು, ಸಂಯಮ, ಸಹಬಾಳ್ವೆ, ಮಾನಸಿಕ ಏಕಾಗ್ರತೆ, ದೂರಾಲೋಚನೆ, ತಾರ್ಕಿಕ ಶಕ್ತಿ, ತಂತ್ರ ನೈಪುಣ್ಯತೆ ಮುಂತಾದಂಥ ಸದ್ಗುಣಗಳು ಬೆಳೆಯುವಂತೆ ಮಾಡುತ್ತವೆ. ಹಾಕಿ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯಾಗಿದ್ದರೂ ಸಹ ಆಸಕ್ತಿಯಿಂದ ಆಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇತರೆ ಕ್ರೀಡೆಗಳಂತೆಯೇ ಹಾಕಿಯನ್ನೂ ಸಹ ಆಸಕ್ತಿಯಿಂದ ಆಡುವ ಅಭಿರುಚಿ ಬೆಳೆಸಿಕೊಳ್ಳಬೇಕು ಮತ್ತು ಆ ಮೂಲಕ ಶಾರೀರಿಕ ಸದೃಢತೆಯನ್ನು ಹೊಂದಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲ ವಿದ್ಯಾರ್ಥಿನಿಯರಿಗೆ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗೆ ದಿನಂಪ್ರತಿ ೩೦ ನಿಮಿಷ ವ್ಯಾಯಾಮ ಮಾಡುವುದಾಗಿ, ಕುಟುಂಬದ ಹಾಗೂ ನೆರೆಹೊರೆಯವರ ಸದೃಢ ಆರೋಗ್ಯಕ್ಕಾಗಿ ಶ್ರಮಿಸುವುದಾಗಿ, ಫಿಟ್ ಇಂಡಿಯಾ ಆಪ್ ಮೂಲಕ ದೈಹಿಕ ಸ್ವಾಸ್ತ್ಯ ಪರಿಪಾಲಿಸಿಕೊಳ್ಳುವುದಾಗಿ ಸಂದೇಶ ನೀಡುವ ಫಿಟ್ ಇಂಡಿಯಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ. ಸುಗುಣಾ, ಡಾ. ಸಯೀದಾ ರಷಿದಾ ಪರ್ವೀನ್, ಡಾ. ಜ್ಯೋತಿ ಸಿ ಕೆ, ಪ್ರೊ. ರಂಗನಾಥ, ಪ್ರೊ. ಸುಮಿತ್ರಾ, ಪ್ರೊ. ಉಮಾದೇವಿ ಸೇರಿದಂತೆ ಎಲ್ಲ ಪ್ರಾಧ್ಯಾಪಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.