ಸರಕಾರಿ ನೌಕರರ ಹೋರಾಟ ಸಂಪೂರ್ಣ ಯಶಸ್ವಿ

ದೇವದುರ್ಗ,ಮಾ.೦೧- ಹೊಸಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಮಾದರಿ ಪಿಂಚಣಿ ವ್ಯವಸ್ಥೆ ಜಾರಿ, ೭ನೇವೇತನ ಮಧ್ಯಂತರ ವರದಿ ಆಧರಿಸಿ ವೇತನ ಮತ್ತು ಭತ್ಯೆ ಪರಿಷ್ಕರಿಸಿ ಆದೇಶ ಹೊರಡಿಸುವದು ಸೇರಿದಂತೆ ಇತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸರಕಾರಿ ನೌಕರರು ಪ್ರಾರಂಭಿಸಿರುವ ಅನಿರ್ಧಿಷ್ಟ ಧರಣಿ ಮೊದಲ ದಿನ ಸಂಪೂರ್ಣ ಯಶಸ್ವಿಯಾಗಿರುವ ವರದಿಯಾಗಿದೆ.
ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಿಯಾಗಿದ್ದ ಹಿನ್ನಲೆಯಲ್ಲಿ ತಹಸೀಲ್, ಸಾರ್ವಜನಿಕ ಆಸ್ಪತ್ರೆ,ತಾ.ಪಂ. ಬಿಇಓ, ಕೃಷಿ, ತೋಟಗಾರಿಕೆ, ಟ್ರೆಝರಿ, ನೋಂದಣಿ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಬಹುತೇಕ ಎಲ್ಲಾ ಇಲಾಖೆಗಳ ಕಚೇರಿಗಳನ್ನು ಬಂದ್ ಮಾಡಲಾಗಿದೆ.
ವಿಶೇಷವಾಗಿ ತಹಸೀಲ್ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಅಲಭ್ಯವಾಗಿದ್ದ ಹಿನ್ನಲೆಯಲ್ಲಿ ಸಾರ್ವಜನಿಕರುಪರದಾಡುವಂತಾಗಿದೆ. ಈ ಹೋರಾಟದಲ್ಲಿ ಧರಣಿ,ಮನವಿ ಪತ್ರ ಸೇರಿದಂತೆ ಇತರೆ ಚಟುವಟಿಕೆಗಳು ಇರದ ಹಿನ್ನಲೆಯಲ್ಲಿ ಏಕಾಎಕಿ ತಾಲೂಕು ಕೇಂದ್ರದಲ್ಲಿ ಬಿಕೋ ವಾತಾವರಣ ನಿರ್ಮಾಣಗೊಂಡಿದೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ತುರ್ತು ಸೇವೆ ಮಾತ್ರ ಲಭ್ಯವಿದ್ದು,ಇತರೆ ಸಾಮಾನ್ಯ ಸೇವೆಗಳು ಸ್ಥಗಿತಗೊಂಡಿದ್ದರಿಂದ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಅವಲಂಬಿತರಾಗಿದ್ದ ದೃಶ್ಯ ಸಾಮಾನ್ಯವಾಗಿತ್ತು. ಪ್ರತಿಭಟನಾ ಧರಣಿ ಇರದ ಹಿನ್ನಲೆಯಲ್ಲಿ ಸರಕಾರಿ ನೌಕರರ ಸಂಘಟನೆ ಪದಾಧಿಕಾರಿಗಳು ನೌಕರರ ಭವನದಲ್ಲಿ ಜಮೆಗೊಂಡಿದ್ದರು.