ಸರಕಾರಿ ನೌಕರರ ಮುಷ್ಕರ ಮಾ. 1 ರಿಂದ

ಇಂಡಿ:ಫೆ.26:ರಾಜ್ಯ ಸರಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆಗೊಳಿಸುವಂತೆ ಒತ್ತಾಯಿಸಿ ಮಾ. 1 ರಿಂದ ಎಲ್ಲ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ದಿಷ್ಠಾವಧಿ ಮುಷ್ಕರ ನಡೆಸುವದಾಗಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟೀಲ ತಿಳಿಸಿದರು.
ಪಟ್ಟಣದ ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರಕಾರ ನೌಕರರಿಗೆ 7 ನೇ ವೇತನ ಆಯೋಗದ ಸೌಲಭ್ಯಗಳನ್ನು 2022 ಜುಲೈನಿಂದಲೇ ಜಾರಿಗೆ ಗೊಳಿಸಬೇಕಾಗಿತ್ತು. ಈ ಸಂಬಂಧ 2023 ಫೆ. 2 ರಂದು ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲೆ ಹಾಗೂ ತಾಲೂಕು ಯೋಜನೆ ಶಾಖೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ವೃಂದಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ತುರ್ತು ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು. ಅಲ್ಲಿ ನೌಕರರ ವೇತನ ಪರಿಷ್ಕರಣೆ ಮತ್ತು ಹಳೆಯ ಪಿಂಚಣಿ ಯೋಜನೆ ಜಾರಿಗೆ ಗೊಳಿಸುವಂತೆ ಸರಕಾರಕ್ಕೆ ಆಗ್ರಹಿಸಿ ಸಮಸ್ತ ಸರಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮುಷ್ಕರ ನಡೆಸಲು ಸುಮಾರು 8000 ಚುನಾಯಿತ ಪ್ರತಿನಿಧಿಗಳ ಸಮ್ಮುಖದಲ್ಲಿ ಸರ್ವಾನುಮತದಿಂದ ನಿರ್ಣಯ ಕೈಕೊಳ್ಳಲಾಗಿದೆ ಎಂದರು.
ರಾಜ್ಯದ 2023-24 ನೇ ಸಾಲಿನ ಅಯವ್ಯಯದಲ್ಲಿ ಸರಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಸಂಬಂದಿಸಿದಂತೆ ಯಾವದೇ ಪ್ರಸ್ತಾಪ ಮಾಡದಿರುವದು ಸಹಜವಾಗಿಯೇ ನೌಕರರಲ್ಲಿ ನಿರಾಸೆ ಮೂಡಿಸಿದ್ದು ಹೋರಾಟದ ಹಾದಿ ಹಿಡಿಯುವದು ಅನಿವಾರ್ಯವಾಗಿದೆ ಎಂದರು.
ವಿಧಾನಸಭೆಯಲ್ಲಿ ಗುರುವಾರ ಮುಖ್ಯಮಂತ್ರಿಗಳು ಮಧ್ಯಂತರ ವರದಿ ತರಿಸಿಕೊಂಡು ಜಾರಿ ಮಾಡುವದಾಗಿ ತಿಳಿಸಿದ್ದಾರೆ. ಸಮೀಪದಲ್ಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಯಾಗಲಿರುವದರಿಂದ ಮುಖ್ಯಮಂತ್ರಿ ಮಾತಿನ ಮೇಲೆ ನೌಕರರಿಗೆ ನಂಬಿಕೆ ಇಲ್ಲದಂತಾಗಿದೆ. 7 ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿ ತರಿಸಿಕೊಂಡು 2023 ರ ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ. 40 ಪಿಟ್ ಮೆಂಟ್ ಸೌಲಭ್ಯವನ್ನು 1-01-2022 ರಿಂದ ಪೂರ್ವಾನ್ವಯ ವಾಗುವಂತೆ ಸರಕಾರ ಆದೇಶ ಹೊರಡಿಸಬೇಕು ಜೊತೆಗೆ ಎನ್‍ಪಿಎಸ್ ವ್ಯಾಪ್ತಿಗೆ ಬರುವ ನೌಕರರನ್ನು ಹಳೆಯ ಪಿಂಚಣಿ ಯೋಜನೆಗೆ ಒಳಪಡಿಸುವ ಆದೇಶವನ್ನು ಕೂಡಲೇ ಮಾಡಬೇಕು ಇಲ್ಲವಾದರೆ ಅನಿರ್ದಿಷ್ಟಾವದಿ ಮುಷ್ಕರ ಯಾವದೇ ಕಾರಣಕ್ಕೂ ನಿಲ್ಲಿಸುವದಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶೇಡಶ್ಯಾಳ, ತಾಲೂಕು ಸರಕಾರಿ ನೌಕರರ ಸಂಘದ
ಪ್ರಧಾನ ಕಾರ್ಯದರ್ಶಿ ರಾಜಶೇಖರ ಮೇತ್ರಿ, ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ,ಗೌರವಾಧ್ಯಕ್ಷ ಎಸ್.ಎನ್.ಕೋಳಿ, ಎಸ್.ವಿ.ಹರಳಯ್ಯ, ಆರ್.ವಿ.ಪಾಟೀಲ, ಎಸ್.ಎಸ್.ನಾಗಣಸೂರ ಮತ್ತಿತರಿದ್ದರು.