ಸರಕಾರಿ ನೌಕರರ ಗಳಿಕೆ ರಜೆ ಸೌಲಭ್ಯ ರದ್ದು ಆದೇಶ ಹಿಂಪಡೆಯಲು ಒತ್ತಾಯಿಸಿ ಮನವಿ

ವಿಜಯಪುರ, ಜ.14-ರಾಜ್ಯ ಸರಕಾರಿ ನೌಕರರಿಗೆ 2021ನೇ ಸಾಲಿನ ಗಳಿಕೆ ರಜೆ ಸೌಲಭ್ಯವನ್ನು ರದ್ದುಪಡಿಸಿರುವ ಆದೇಶವನ್ನು ರಾಜ್ಯ ಸರಕಾರ ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಅಖಿಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಒಕ್ಕೂಟ ಬೆಂಗಳೂರು, ಜಿಲ್ಲಾ ಶಾಖೆ ವಿಜಯಪುರ ಪದಾಧಿಖಾರಿಗಳು ಮನವಿ ಮೂಲಕ ಒತ್ತಾಯಿಸಿದರು.
ರಾಜ್ಯ ಸರಕಾರ ಜ.1, 2021ರಿಂದ ಡಿ.31, 2021ರವರೆಗಿನ ಅವಧಿಯಲ್ಲಿ ಗಳಿಕೆ ರಜೆಯನ್ನು ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸಿರುವ ಕ್ರಮ ಸರಿಯಲ್ಲ. ಕೋವಿಡ್ ನೆಪವೊಡ್ಡಿ 2020ನೇ ಸಾಲಿನ ಗಳಿಕೆ ರಜೆ ಮತ್ತು ತುಟ್ಟಿಭತ್ತೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈಗ 2021ನೇ ಸಾಲಿನಲ್ಲೂ ಈ ಸೌಲಭ್ಯವನ್ನು ರದ್ದುಗೊಳಿಸಿರುವುದು ಕ್ರೂರ ಕ್ರಮವಾಗಿದೆ ಎಂದು ಸಂಘ ಖಂಡಿಸಿದೆ ರಾಜ್ಯಾದ್ಯಂತ ಸುಮಾರು 2.50ಲಕ್ಷ ಖಾಲಿ ಹುದ್ದೆಗಳ ಕೆಲಸದ ಹೊರೆಯನ್ನು ಹಾಲಿ ನಾಕರರೇ ನಿರ್ವಹಿಸುತ್ತಿದ್ದಾರೆ. ಅದೇ ವೇಳೆ ನಿಗಮ ಮತ್ತು ಮಂಡಳಿಗಾಗಿ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ನೇಮಕ ಮಾಡುತ್ತಾ, ಅದಕ್ಕೆ ಅವಶ್ಯವಿರುವ ವೇತನ ಸೌಲಭ್ಯ, ವಾಹನ ಸೌಲಭ್ಯ, ಮನೆ ಬಾಡಿಗೆ, ವೆಚ್ಚ, ದೂರವಾಣಿ ವೆಚ್ಚಗಳಿಗೆ ನೂರಾರು ಕೋಟಿ ರೂ.ವೆಚ್ಚವಾಗುತ್ತಿದೆ. ಇದೆಲ್ಲವುಗಳ ನಡುವೆ ಆರ್ಥಿಕ ಮಿತವ್ಯಯ ಕ್ರಮಗಳನ್ನು ಸಾಮಾನ್ಯ ನೌಕರರ ಮೇಲೆ ಮಾತ್ರವೇ ಹೇರಲಾಗುತ್ತಿರುವುದು ಸರಿಯಲ್ಲ. ಕೂಡಲೇ ರಾಜ್ಯ ಸರಕಾರ ಆದೇಶವನ್ನು ಹಿಂಪಡೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಲೆಂಡೆ, ರಾಜ್ಯ ಕಾರ್ಯದರ್ಶಿ ಸುರೇಶ ಜೀಬಿ, ಅಶೋಕ, ಸಂತೋಷ ಯರಗಲ್, ಶಾಂತಗೌಡ ಅಲ್ಯಾಳ, ಕವಿತಾ ಗಾಳಿ, ವಿಜಯಲಕ್ಷ್ಮೀ ಬಿರಾದಾರ, ಶಿವರಾಜ ಹುರಕಡ್ಲಿ, ಶಾಂತಗೌಡ ಅಲ್ಯಾಳ, ಆರ್.ಕೆ.ಅಹ್ಮದ್, ಆರ್.ಎಸ್. ಮೆಣಸಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.