ಸರಕಾರಿ ನೌಕರರು ಪ್ರತಿಫಲಾಪೇಕ್ಷೆ ಹೊಂದಿರಬಾರದು: ಹೀರೇಮಠ್

ಹೊಸಪೇಟೆ, ನ.3- ಸರಕಾರಿ ನೌಕರರು ಎಂದಿಗೂ ಆಮೀಷಗಳಿಗೆ ಒಳಗಾಗದೇ ಕಾರ್ಯನಿರ್ವಹಿಸುವ ಜೊತೆ ಇಲಾಖೆಯ ಸೌಲಭ್ಯ ಅರಸಿ ಬರುವ ಸಾರ್ವಜನಿಕರಿಂದ ಪ್ರತಿಫಲಾಪೇಕ್ಷೆಯನ್ನು ಹೊಂದಿರಬಾರದು ಎಂದು ಭ್ರಷ್ಟಾಚಾರ ನಿಗ್ರಹ ದಳದ ಇನ್ಸಪೆಕ್ಟರ್ ಪ್ರಭುಲಿಂಗಯ್ಯ ಹಿರೇಮಠ್ ಅವರು ಮಾತನಾಡಿದರು.
ಬಳ್ಳಾರಿಯ ಜಿಲ್ಲೆಯ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯ ವತಿಯಿಂದ ಹಮ್ಮಿಕೊಂಡಿರುವ ಸರ್ತಕ ಭಾರತ ಸಮೃದ್ಧ ಭಾರತ ಜಾಗೃತಿ ಸಪ್ತಾಹ ದಿನವನ್ನು ಇಂದು ನಗರದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಚೇರಿಯಲ್ಲಿ ಆಯೋಜಿಸಿ ಸಾರಿಗೆ ಇಲಾಖೆಯ ಸಿಬ್ಬಂದಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಸಮಗ್ರ ಅಭಿವೃದ್ಧಿಗೆ ಭ್ರಷ್ಟಾಚಾರವೇ ಬಹುದೊಡ್ಡ ತೊಡಕಾಗಿದೆ. ಅದಕ್ಕೆ ಕಡಿವಾಣ ಹಾಕಿದಲ್ಲಿ ಮಾತ್ರ ಸಮೃದ್ಧ ಭಾರತ ನಿರ್ಮಾಣವಾಗಲು ಸಾಧ್ಯ, ಸರಕಾರಿ ಸೇವೆಯಲ್ಲಿರುವ ನೌಕರರು ತಮ್ಮ ದುರಾಸೆಗಳನ್ನಃ ಬಿಡಬೇಕು. ಸಾರ್ವಜನಿಕರು ಸರಕಾರಿ ಕಚೇರಿಗಳಿಗೆ ಕೆಲಸದ ನಿಮಿತ್ತ ಭೇಟಿ ನೀಡಿದಾಗ ಅವರ ಅವಶ್ಯಕತೆ ಹಾಗೂ ತೊಂದರೆಗಳನ್ನು ಅರ್ಥ ಮಾಡಿಕೊಂಡು ಅವರಿಂದ ಯಾವುದೇ ಫಲಾಪೇಕ್ಷೆ ಪಡೆಯದೇ ಅವರ ಕಾರ್ಯಗಳನ್ನು ಮಾಡಿಕೊಡಬೇಕು. ಈ ಮೂಲಕ ಸರಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಬಳಕೆಗೆ ಅನಕೂಲ ಕಲ್ಪಿಸಿಕೊಡಬೇಕು. ಜೀವನದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸಬೇಕು. ಎಲ್ಲ ಕಾರ್ಯಗಳನ್ನು ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಿಸಬೇಕು ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿಭಾಗೀಯ ತಾಂತ್ರಿಕಾಧಿಕಾರಿ ಅಲ್ತಾಫ್ ಹುಸೇನ್, ಸಂಚಾರ ಅಧಿಕಾರಿ ಕೆ.ಬಸವರಾಜ್, ಲೆಕ್ಕಾಧಿಕಾರಿ ಎಸ್.ಚಿತ್ತವಾಡಿಗೆಪ್ಪ, ಭದ್ರತಾ ಮತ್ತು ಜಾಗೃತಾಧಿಕಾರಿ ರಾಜಶೇಖರ ಅಣ್ಣೆಗೇರಿ, ಕಾರ್ಮಿಕ ಕಲ್ಯಾಣಾಧಿಕಾರಿ ರಾಮಪ್ಪ ಗುಡಿಗೇರಿ ಸೇರಿದಂತೆ ಇಲಾಖೆಯ ಸಿಬ್ಬಂದಿಗಳು ಇದ್ದರು.