ಸರಕಾರಿ ಆಸ್ಪತ್ರೆಯ ಕೊವೀಡ್ ವಾರ್ಡ್‍ಗೆ ಅರುಣಕುಮಾರ ಪಾಟೀಲ್ ಭೇಟಿ

ಅಫಜಲಪುರ:ಎ.19: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಿದ್ದ ಪಡಿಸಲಾದ ಎರಡು ಕೊವಿಡ್ ಕೋಣೆಗಳಿಗೆ ಜಿ.ಪಂ ಸದಸ್ಯ ಅರುಣಕುಮಾರ ಎಂ.ವೈ. ಪಾಟೀಲ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ವೀಕ್ಷಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊವಿಡ್ ಎರಡನೇ ಅಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಹೀಗಾಗಿ ಇದನ್ನು ತಡೆಯಲು ಎರಡು ಕೋವಿಡ್ ಕೋಣೆಗಳನ್ನು ತೆರೆಯಲಾಗಿದೆ. ಸಾಮಾನ್ಯ ಲಕ್ಷಣಗಳಿರುವ ರೋಗಿಗಳಿಗೆ ಇಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಗಂಭೀರ ಸ್ವರೂಪದ ಲಕ್ಷಣಗಳು ಇದ್ದರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಹೀಗಾಗಿ ಸಾರ್ವಜನಿಕರು ಕೋವಿಡ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಸಲಹೆ ಸೂಚನೆ ಪಾಲಿಸಿದ್ದಲ್ಲಿ ಸಾರ್ವಜನಿಕರು ಯಾವುದೇ ರೀತಿಯ ಭಯ ಪಡುವ ಅವಶ್ಯಕತೆಯಿಲ್ಲ ಎಂದ ಅವರು ಸಾರ್ವಜನಿಕರು ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡು ಮುಂಜಾಗೃತೆ ವಹಿಸಬೇಕು. ಈ ನಿಟ್ಟಿನಲ್ಲಿ ವೈದ್ಯರು ಕೂಡ ತಮ್ಮ ಕರ್ತವ್ಯ ಮರೆಯದೆ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಬೇಕು. ಕೋವಿಡ್ ಮಹಾಮಾರಿ ಎಲ್ಲರನ್ನು ಸಂಕಷ್ಟಕ್ಕೆ ನೂಕಿದೆ. ಇಂತಹ ಪರಿಸ್ಥಿತಿಯಲ್ಲಿ ವೈದ್ಯರೇ ದೇವರಾಗಿ ಜನರ ಜೀವ ಉಳಿಸುವ ಕೆಲಸ ಮಾಡಬೇಕಾಗಿದೆ. ಹೀಗಾಗಿ ವೈದ್ಯರು ಕರ್ತವ್ಯ ನಿಷ್ಠೆ ತೋರಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಮುಖಂಡ ಅಂಬಾರಾಯ ಹರಳಯ್ಯ ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಇದ್ದರು.