ಸರಕಾರಿ ಆಸ್ಪತ್ರೆಗೆ ಕಾಡುತ್ತಿದೆ ವಿದ್ಯುತ್ ಕೊರತೆ ಉಸಿರು ನಿಲ್ಲಿಸಿದ ಉಚಿತ ಕಿಡ್ನಿ ಡಯಾಲಿಸಿಸ್ ಕೇಂದ್ರ: ರೋಗಿಗಳ ಪರದಾಟ

ಎ.ಬಿ.ಪಟೇಲ್ ಸೊನ್ನ

ಅಫಜಲಪುರ: ಮಾ.22: ಕರ್ನಾಟಕ ಸರಕಾರ ಹಾಗೂ ಬಿಆರ್‍ಎಸ್ ಸಂಸ್ಥೆಯವರ ಸಹಯೋಗದಲ್ಲಿ ಉಚಿತ ಡಯಾಲಿಸಿಸ್ ಸೇವೆ ಸಲ್ಲಿಸುವ ಕೇಂದ್ರ ನಾಲ್ಕು ವರ್ಷಗಳಿಂದ ವಿದ್ಯುತ್ ಪವರ್ ಇಲ್ಲದೇ ನಲಗುತ್ತಿದೆ.

ಉಚಿತ ಈ ಡಯಾಲಿಸಿಸ್ ಕೇಂದ್ರ ಬೆಂಗಳೂರು ಮೂಲದ ಕುಶಾಲ್ ಶೆಟ್ಟಿ ಎನ್ನುವವರು ಬಿಆರ್‍ಎಸ್ ಹೆಲ್ತ್ ರಿಸರ್ಚ್ ಇನ್ಸ್‍ಟ್ಯೂಟ್ ಅವರ ಪಾಲು ಇದೆ. ಈ ಕೇಂದ್ರದಲ್ಲಿ ಎರಡು ಜನ ಟೆಕ್ನಿಶನ್ ಸಿಬ್ಬಂದಿ ಒಬ್ಬರು ಇನ್‍ಚಾರ್ಜ್, ಎರಡು ಜನ ಡಿ ಗ್ರೂಪ್ ಸಿಬ್ಬಂದಿಗಳು ಇರಬೇಕು. ಆದರೆ ಒಬ್ಬ ಟೆಕ್ನಿಷನ್, ಒಬ್ಬ ಡಿ ಗ್ರೂಪ್ ನೌಕರರು ಇದ್ದು, ಯಾವ ರೋಗಿಗಳಿಗೂ ಚಿಕಿತ್ಸೆ ನೀಡಲು ಆಗದಂತ ಪರಿಸ್ಥಿತಿ ಅಂತಹದರಲ್ಲಿ ಸಮರ್ಪಕವಾದ ವಿದ್ಯುತ್ ಇಲ್ಲ! ಏನು ಮಾಡುವುದು ಎಂದು ಸಿಬ್ಬಂದಿ ತಮ್ಮ ಅಸಮಾಧಾನ ಹೊರಹಾಕಿದರೆ, ಆಸ್ಪತ್ರೆಯ ಹಿರಿಯ ವೈದ್ಯರಾದ ಮಹಾಂತಪ್ಪ ಹಾಳಮಳ್ಳಿ ಅವರು ಸಹ ಮಾತನಾಡಿ ಪವರ್ ಸಮಸ್ಯೆ ಇದೆ. ಜೆಸ್ಕಾಂಗೆ ಇನ್ನೊಂದು ಪ್ರತ್ಯೇಕ ಟಿ.ಸಿ ಅಳವಡಿಸುವಂತೆ ಪತ್ರ ಬರೆಯಲಾಗಿದೆ. ಈವರೆಗೆ ವ್ಯವಸ್ಥೆ ಆಗಿಲ್ಲ. ಹೀಗಾಗಿ ಉಚಿತ ಕಿಡ್ನಿ ಡಯಾಲಿಸಿಸ್ ಕೇಂದ್ರ ನಿಂತು ಹೋಗಿದೆ. ಏನು ಮಾಡುವುದು? ಈ ಭಾಗದ ಬಡರೋಗಿಗಳಿಗೆ ಅನುಕೂಲ ಮಾಡಿಕೊಡಲು ಆಗುತ್ತಿಲ್ಲ ಎಂದು ಹೇಳಿದರು.

ರೋಗಿಗಳಿಗೆ ಉಚಿತ ಡಯಾಲಿಸಿಸ್‍ನಲ್ಲಿ ಚಿಕಿತ್ಸೆ ನೀಡದಿದ್ದರು ಸಹ ಬೆಂಗಳೂರು ಮೂಲದ ಬಿಆರ್‍ಎಸ್ ಹೆಲ್ತ್ ರಿಸರ್ಚ ಟೆಕ್ನಿಷನ್ ಏಜೆನ್ಸಿ ಮಾಲೀಕರಾದ ಕುಶಾಲ್ ಶೆಟ್ಟಿ ಅವರಿಗೆ ಸರಕಾರ ನಿಗದಿ ಮಾಡಿದ ಹಣ ನೇರವಾಗಿ ಆ ಸಂಸ್ಥೆಯ ಅಕೌಂಟ್‍ಗೆ ಹೋಗುತ್ತಿದೆ ಎಂದು ಕಿಡ್ನಿ ಖಾಯಿಲೆಯಿಂದ ಬಳಲುತ್ತಿರುವ ಬಡರೋಗಿಗಳು ತಮ್ಮ ಅಸಮಾಧಾನ ಹೊರಹಾಕುತ್ತಾರೆ. ಕಿಡ್ನಿ ಡಯಾಲಿಸಿಸ್ ಮಾಡಿಕೊಳ್ಳಲು ಸಾಕಷ್ಟು ಹಣ ಖರ್ಚಾಗುತ್ತದೆ. ಅಲ್ಲದೇ ಜಿಲ್ಲೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳಿಗೆ ಹೋಗುವಷ್ಟು ತಮ್ಮಲ್ಲಿ ಹಣವಿರುವುದಿಲ್ಲ ಏನು ಮಾಡುವುದು ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಎಲ್ಲ ವರ್ಗದ ಜನಸಾಮಾನ್ಯರಿಗೆ ಕಿಡ್ನಿ ಡಯಾಲಿಸಿಸ್ ಸೇವೆಯನ್ನು ಉಚಿತವಾಗಿ ಒದಗಿಸಲಾಗುವುದು ಅಲ್ಲದೇ ಉಚಿತ ಇಂಜೆಕ್ಷನ್, ಎರಿತ್ರೊಪ್ರೋಟಿನ್, ಐರನ್ ಸುಕ್ರೋಸ್ ಮತ್ತು ಇತರೆ ಸೌಲಭ್ಯಕ್ಕಾಗಿ ಆಡಳಿತ ವೈದ್ಯಾಧಿಕಾರಿಗಳನ್ನು ಸಂಪರ್ಕಿಸುವುದು ಎನ್ನುವ ಫಲಕ ಮತ್ತು ಪ್ರಚಾರಕ್ಕೆ ಕೊರತೆಯಿಲ್ಲ. ಸಂಬಂಧಪಟ್ಟ ಆರೋಗ್ಯ ಇಲಾಖೆಯ ಡಿಎಚ್‍ಓ, ಟಿಎಚ್‍ಓ ಅವರು ಆರೋಗ್ಯ ಇಲಾಖೆಯ ಸಚಿವರ ಗಮನಕ್ಕೆ ತಂದು ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಈ ಯೋಜನೆಯ ಅನುದಾನ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು.