ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು: ಕಾಚೆಟ್ಟಿ

ಬಾದಾಮಿ,ಜ19: ಸರಕಾರ ವಿಕಲಚೇತನ ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳನ್ನು ಕಲ್ಪಿಸಿದೆ ಪಾಲಕರು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಸರಕಾರದ ಸೌಲಭ್ಯ ದೊರಕಿಸುವ ಮೂಲಕ ಶಿಕ್ಷಣದ ಮುಖ್ಯವಾಹಿನಿಗೆ ತರಬೇಕು ಎಂದು ಪುರಸಭೆ ಸದಸ್ಯ ಹಾಗೂ ಬಾದಾಮಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಕಾಚೆಟ್ಟಿ ಹೇಳಿದರು.
ಅವರು ಪಟ್ಟಣದ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ತಾಲೂಕಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ವಿಕಲಚೇತನ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರ ವಿಕಲಚೇತನ ಮಕ್ಕಳು ಶಾಲೆಗೆ ಬರಲು ಮತ್ತು ದೈನಂದಿನ ಕೆಲಸ ಮಾಡಲು ಅನುಕೂಲವಾಗುವಂತೆ ಸಲಕರಣೆಗಳನ್ನು ಕೊಡಲಾಗುತ್ತಿದೆ. ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಸಲಕರಣೆಗಳನ್ನು ನೀಡಲಾಗುತ್ತಿದ್ದು, ಪಾಲಕರು ಸದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಪಾಲಕರು ಇಂತಹ ವಿಕಲಚೇತನ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರಿಸದೇ ವಿಶೇಷ ಕಾಳಜಿ ವಹಿಸಬೇಕು. ಮನೆಯಲ್ಲಿ ಬೆಳಿಗ್ಗೆ ದೈನಂದಿನ ಕೌಶಲಗಳನ್ನು ಮಾಡಿಸಬೇಕು. ಪೌಷ್ಟಿಕ ಆಹಾರ ನೀಡುವ ಮೂಲಕ ಇತರ ಮಕ್ಕಳಂತೆ ಆರೈಕೆ ಮಾಡಬೇಕು ಎಂದು ಹೇಳಿದರು. ವೇದಿಕೆಯ ಮೇಲೆ ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ, ಸ್ಥಳೀಯ ಕೇಂಬ್ರಿಡ್ಜ್ ಶಾಲೆಯ ಮುಖ್ಯಶಿಕ್ಷಕ ರಾಘವೇಂದ್ರ ನಾಗನೂರ, ವೈದ್ಯರಾದ ಡಾ.ನವೀನಕುಮಾರ ಬಿರಾದಾರ, ಡಾ.ಕ್ರಾಂತಿ ಗೌರಿಪುರ, ಡಾ.ಪ್ರಸನ್ನರಡ್ಡಿ, ಡಾ.ಪಾಂಡೆ, ಡಾ.ಯಾದವ ಹಾಜರಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಎಂ.ಬಿ.ದೊಡ್ಡಪ್ಪನ್ನವರ ಪ್ರಾಸ್ಥಾವಿಕವಾಗಿ ಮಾತನಾಡಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ 6 ರಿಂದ 16 ವಯೋಮಾನದ ವಿಕಲಚೇತನ ಮಕ್ಕಳಿಗೆ ಸಾರಿಗೆ, ಬೆಂಗಾವಲು, ಹೆಣ್ಣುಮಕ್ಕಳ ಪ್ರೋತ್ಸಾಹಧನ, ಪಿಜಿಯೋಥೆರಪಿ ಸೇರಿದಂತೆ ಅನೇಕ ಸೌಲಭ್ಯಗಳಿದ್ದು, ಇದನ್ನು ಇಲಾಖೆಯು ಸಮರ್ಥವಾಗಿ ಅನುಷ್ಟಾನಗೊಳಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಶಿಬಿರದಲ್ಲಿ ತಾಲೂಕಿನ ವಿವಿದ ಸರಕಾರಿ ಶಾಲೆ/ಕಾಲೇಜುಗಳಿಂದ ಆಗಮಿಸಿದ 300 ಕ್ಕೂ ಹೆಚ್ಚು ದೃಷ್ಠಿದೋಷ, ಶ್ರವಣದೋಷ ಮತ್ತು ದೈಹಿಕ ವಿಕಲತೆಯ ಮಕ್ಕಳನ್ನು ತಪಾಸಣಾ ಮಾಡಿ ಸಾಧನ ಸಲಕರಣೆಗಳನ್ನು ಶಿಫಾರಸು ಮಾಡಲಾಯಿತು.