ಸರಕಾರದ ವಿವಿಧ ಸೌಲಭ್ಯಗಳ ಲಾಭ ದೊರಕಿಸಿ- ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಿ: ಸಚಿವ ದರ್ಶನಾಪೂರ

ಯಾದಗಿರಿ : ಸೆ.26 : ಸರಕಾರದ ವಿವಿಧ ಯೋಜನೆಗಳಡಿಯ ಸೌಲಭ್ಯ ಹಾಗೂ ನಾಗರಿಕರ ಕುಂದುಕೊರತೆ ಅಹವಾಲುಗಳಿಗೆ ತಕ್ಷಣ ಸ್ಪಂದಿಸಿ, ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವಾರದ ಶ್ರೀ ಶರಣಬಸಪ್ಪಗೌಡ ದರ್ಶನಾಪೂರ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಡಾ.ಬಾಬು ಜಗಜೀವನರಾಂ ಭವನದಲ್ಲಿ ಸೋಮವಾರ ರಂದು “ಜನತಾ ದರ್ಶನ” ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರವು ಮಹತ್ವಾಕಾಂಕ್ಷೆಯೊಂದಿಗೆ, ಮಾನ್ಯ ಮುಖ್ಯ ಮಂತ್ರಿಗಳ ಮುತುವರ್ಜಿಯಿಂದ ರಾಜ್ಯಾದ್ಯಂತ ಈ ಮಹತ್ವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸರಕಾರದ ಸೌಲಭ್ಯಗಳು ಕಡುಬಡವರು, ಸಮಾಜದ ಪ್ರತಿ ವ್ಯಕ್ತಿಗೆ ದೊರಕಿಸಲು ಹೆಚ್ಚಿನ ಆಸಕ್ತಿಯೊಂದಿಗೆ ಜನತಾ ದರ್ಶನ ಹಮ್ಮಿಕೊಂಡಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಸಲ್ಲಿಸಿದಾಗ ಅಧಿಕಾರಿಗಳು ಸಕಾಲಕ್ಕೆ ಸ್ಪಂದಿಸಿ ಪರಿಹರಿಸಿದ್ದಲ್ಲಿ ಸರಕಾರಕ್ಕೂ ಹಾಗೂ ಜನಪ್ರತಿನಿಧಿಗಳಿಗೂ ಒಳ್ಳೆಯ ಹೆಸರು ಬರಲು ಸಾಧ್ಯ ಎಂದು ಹೇಳಿದರು.
ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿದಲ್ಲಿ ಹಾಗೂ ಪರಿಹರಿಸಿದಲ್ಲಿ ಸರಕಾರದ ಕಾರ್ಯ ವೈಖರಿಯಲ್ಲಿ ಹೆಚ್ಚಿನ ಬೆಳಕು ಚೆಲ್ಲಲು ಸಾಧ್ಯವಿದೆ. ಜಿಲ್ಲೆಯ ಜನತೆಯ ಸಮಸ್ಯೆಗಳನ್ನು ಪರಿಹರಿಸಲು ವಾರದಲ್ಲಿ 5 ದಿನ ಲಭ್ಯವಿದ್ದು, ಅವರ ಸಮಸ್ಯೆಗಳನ್ನು ಹೆಚ್ಚಿನ ರೀತಿಯಲ್ಲಿ ಪರಿಹರಿಸಿ, ಅಹವಾಲು ಸಲ್ಲಿಕೆಯಲ್ಲಿ ಗಣನೀಯ ಕಡಿತಗೊಳಿಸುವುದರಿಂದ ಜನಪರ ಆಡಳಿತ ಜನರಿಗೆ ನೀಡಿದಂತಾಗುತ್ತದೆ. ಈ ದಿಸೆಯಲ್ಲಿ ಜನತಾ ದರ್ಶನ ಮೂಲಕ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹರಿಸಲು ಸರಕಾರ ಇಂತಹ ದಿಟ್ಟಹೆಜ್ಜೆಯನ್ನು ಸರಕಾರ ಇಟ್ಟಿದೆ ಈ ಜಿಲ್ಲೆಯಲ್ಲಿ ಶೇ. 50 ರಷ್ಟು ಅಧಿಕಾರಿಗಳ ಕೊರತೆ ಮಧ್ಯೆಯೂ ಜನರಿಗೆ ಶಿಕ್ಷಣ, ಆರೋಗ್ಯ, ಸ್ವಚ್ಚತೆ, ನಗರ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಗಳು ಹಾಗೂ ಸರಕಾರದ ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ಕುಂದುಕೊರತೆ ಅರ್ಜಿಗಳು ಬಂದ ತಕ್ಷಣ ಸ್ಪಂದಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯ ಸರಕಾರ ಇದೇ ಪ್ರಥಮ ಬಾರಿಗೆ ಜನತಾ ದರ್ಶನದಂತಹ ಮಹತ್ವಾಕಾಂಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದ್ದು, ಪ್ರತಿ ತಿಂಗಳು 15 ದಿನಗಳಿಗೊಮ್ಮೆ ತಾಲೂಕಾವಾರು ಜನತಾ ದರ್ಶನ ಹಮ್ಮಿಕೊಳ್ಳಲಾಗುತ್ತಿದ್ದು, ಇಂದು ಸಲ್ಲಿಕೆಯಾಗಿರುವ ಅರ್ಜಿಗಳಿಗೆ ತಕ್ಷಣ ಅಧಿಕಾರಿಗಳು ಪರಿಹಾರ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಅವಶ್ಯಕ ಕ್ರಮ ಕೈಗೊಳ್ಳಲಾಗುವುದು, ಕೃಷಿ, ತೋಟಗಾರಿಕೆ, ಗ್ಯಾರಂಟಿ ಯೋಜನೆಗಳ ಲಾಭ ಅರ್ಹರಿಗೆ ತಲುಪಿಸಬೇಕು, ಆರೋಗ್ಯ ಕ್ಷೇತ್ರ ಸುಧಾರಿಸಬೇಕು, ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಜೊತೆಗೆ ಉತ್ತಮ ಫಲಿತಾಂಶಕ್ಕೆ ವಿಶೇಷ ಗಮನ ನೀಡುವಂತೆ ಅವರು ಸೂಚನೆ ನೀಡಿದರು.
ಸಚಿವರು ಇದೇ ಸಂದರ್ಭದಲ್ಲಿ ಸುರಪುರ ತಾಲೂಕಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಜಮೀನಿಗೆ ರಸ್ತೆ ಸೌಲಭ್ಯ, ಸುರಪುರದಿಂದ ಹುಣಸಗಿ ತಾಲೂಕಿಗೆ 5 ಭೂಮಿಕೇಂದ್ರಗಳ ಸ್ಥಳಾಂತರ, ವಾರಸಾ ಅರ್ಜಿಗಳ ಮೇಲೆ ಸೂಕ್ತ ಕ್ರಮ, ಸರಕಾರಿ ಹಾಗೂ ರುದ್ರಭೂಮಿಗಳ ಒತ್ತುವರಿ ತೆರವು, ಗೃಹಲಕ್ಷಿ??ೀ ಯೋಜನೆಯಡಿ ಹೆಚ್ಚಿನ ನೋಂದಣಿ ಮಾಡಸಬೇಕು, ಸಂಧ್ಯಾಸುರಕ್ಷಾ ಯೋಜನೆ ಹಾಗೂ ವಿಕಲಚೇತನರಿಗೆ ವಿವಿಧ ಸೌಲಭ್ಯಗಳು ಆದ್ಯತೆ ಮೇಲೆ ಕಲ್ಪಿಸಬೇಕು, ನಾರಾಯಣಪೂರ ಬಂಡೆಗುಂಡು ಕ್ಯಾಂಪ್‍ಗೆ ಟಿ.ಸಿ ಅಳವಡಿಕೆ ಮಾಡಬೇಕು.
ಸುರಪುರ ನಗಸಭೆ ವ್ಯಾಪ್ತಿಯಲ್ಲಿ ನಿವೇಶನ ಮತ್ತು ವಸತಿ ಸೌಲಭ್ಯ, ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಅನಧೀಕೃತ ಕಟ್ಟಡ ತೆರವು, ಸುರಪುರ ಉರ್ದು ಪ್ರೌಢ ಶಾಲೆಗೆ 2 ಹೆಚ್ಚುವರಿ ಕೋಣೆ ಮಂಜೂರು ಮಾಡಬೇಕು, ಹಾಗೂ 2 ಕೋಣೆ ದುರಸ್ಥಿಗೊಳಿಸಬೇಕು, ಕೆಂಭಾವಿ ಆಸ್ಪತ್ರೆ ಉನ್ನತೀಕರಣಕ್ಕೆ ವಿಶೇಷ ಗಮನ ನೀಡಲು ಸೂಚಿಸಿ ಯಾದಗಿರಿ ನಗರದ ಮೀನು ಮಾರುಕಟ್ಟೆ ಕಾಮಗಾರಿಗಳ ಪರಿಶೀಲನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಕೈಗೊಳ್ಳುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜನತಾ ದರ್ಶನದಲ್ಲಿ ಒಟ್ಟು 245 ಕ್ಕೂ ಹೆಚ್ಚು ಅರ್ಜಿಗಳು (ಐಪಿಜಿಆರ್‍ಎಸ್) ನಲ್ಲಿ ನೋಂದಣಿಯಾಗಿವೆ ಸಚಿವರು ಇಂದು 35 ಅರ್ಜಿಗಳ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಶಾಸಕ ಚನ್ನರೆಡ್ಡಿಪಾಟೀಲ್ ತುನ್ನೂರ ಅವರು ಮಾತನಾಡಿ ಜಿಲ್ಲೆಯ ಬಡ ಜನರಿಗೆ ನಗರ ಮತ್ತು ಗ್ರಾಮಾಂತರ ಪ್ರದೇಶದ ವ್ಯಾಪ್ತಿಯಲ್ಲಿ ವಸತಿ ಮತ್ತು ನಿವೇಶ, ಹಾಗೂ ಕುಡಿಯುವ ನೀರು ಸೌಲಭ್ಯ ಕಲ್ಪಿಸಬೇಕು, ಹಲವಾರು ವರ್ಷಗಳಿಂದ ಬಾಕಿ ಉಳಿದ ಅರ್ಜಿಗಳಿಗೆ ತಕ್ಷಣ ಸ್ಪಂದಿಸಲು ಜನತಾ ದರ್ಶನ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸುರಪುರ ಶಾಸಕರಾದ ರಾಜಾ ವೆಂಕಟಪ್ಪನಾಯಕ, ಗುರುಮಠಕಲ್ ಶಾಸಕ ಶರಣಗೌಡ ಕಂದುಕೂರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ಮನೋಜ್ ಜೈನ್, ಜಿಲ್ಲಾಧಿಕಾರಿ ಶ್ರೀಮತಿ ಡಾ.ಸುಶೀಲಾ.ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಗರಿಮಾ ಪನ್ವಾರ್, ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್, ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ ಸ್ವಾಗತಿಸಿದರು, ಸಹಾಯಕ ಆಯುಕ್ತರು ಶ್ರೀ ಹಂಪಣ್ಣ ಸಜ್ಜನ ಅವರು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆ ಸಿಬ್ಬಂದಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.