ಸರಕಾರದ ಯೋಜನೆ ಮತ್ತಿಷ್ಟು ಪ್ರೇರೇಪಿಸಲು ಸಹಕಾರಿ-ಸಿಇಓ

ರಾಯಚೂರು.ಮಾ.೦೭- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ೨೦೧೮-೧೯ನೇ ಸಾಲಿನಲ್ಲಿ ೧೦೦ ಮಾನವ ದಿನಗಳನ್ನು ಸೃಜನೆ ಮಾಡಿದ ಕೂಲಿಕಾರರ ಉನ್ನತಿ ಸರ್ವೇ ಮಾಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಅತಿ ಹೆಚ್ಚು ಫಲಾನುಭವಿಗಳಿಗೆ ತರಬೇತಿ ನೀಡಿರುವುದಕ್ಕೆ ೨೦೨೨-೨೩ ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಸಾಧನೆಯ ಪ್ರಶಸ್ತಿಗೆ ರಾಯಚೂರು ಜಿಲ್ಲೆಯು ಆಯ್ಕೆಯಾಗಿದೆ.
ಇದೇ ಮಾರ್ಚ್ ೮ರಂದು ಬೆಂಗಳೂರಿನ ತ್ರಿಪುರ ವಾಸಿನಿ ಸಭಾಂಗಣ ಅರಮನೆ ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸ್ತ್ರೀ ಸಾಮರ್ಥ್ಯ ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ರಾಜ್ಯ ಮಟ್ಟದ ಉತ್ತಮ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ರಾಜ್ಯ ಮಟ್ಟದ ಜಿಲ್ಲಾ ಪ್ರಶಸ್ತಿಗೆ ರಾಯಚೂರು ಜಿಲ್ಲೆಯು ಭಾಜನವಾಗಿದೆ.
ಜಿಲ್ಲೆಯು ಉನ್ನತಿ ಯೋಜನೆಯಡಿ ೨೦೨೨-೨೩ನೇ ಸಾಲಿನಲ್ಲಿ ೧೧೦ ಫಲಾನುಭವಿಗಳ ಗುರಿಗೆ ಅನುಗುಣವಾಗಿ ೧೨೩ ಫಲಾನುಭವಿಗಳಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಕುರಿತಾಗಿ ತರಬೇತಿ ನೀಡಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಳ್ಳಲಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ೨೦೧೮-೧೯ ಆರ್ಥಿಕ ಸಾಲಿನಲ್ಲಿ ೧೦೦ ಮಾನವ ದಿನಗಳ ಉದ್ಯೋಗ ಸೃಜನೆ ಮಾಡಿದ ಫಲಾನುಭವಿಗಳು ಅಥವಾ ಅವರ ಕುಟುಂಬದ ಒಬ್ಬ ವಯಸ್ಕ ೧೮ ರಿಂದ ೪೫ ವರ್ಷದ ವರೆಗಿನ ಸದಸ್ಯರಿಗೆ ನೀಡಲಾಗುತ್ತದೆ.
ನಿರುದ್ಯೋಗಿ ಯುವಕ ಅಥವಾ ಯುವತಿಯರಿಗೆ ಅವರ ಆಸಕ್ತಿಗೆ ಅನುಗುಣವಾಗಿ ಜೀವನೋಪಾಯವನ್ನು ರೂಪಿಸಲು ಕೌಶಲ್ಯ ತರಬೇತಿ ಆಯೋಜಿಸಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ , ಕೃಷಿ ಹಾಗೂ ರೈತರ ಕಲ್ಯಾಣ ಸಚಿವರು ಭಾರತ ಸರ್ಕಾರವು ೨೦೧೯ ಡಿಸೆಂಬರ್ ೧೯ ರಂದು ನವದೆಹಲಿಯಲ್ಲಿ ಉನ್ನತಿ ಯೋಜನೆಯನ್ನು ಜಾರಿಗೊಳಿಸಿದ್ದರು. ಈ ಯೋಜನೆಯು ೨೦೨೦-೨೧ ನೇ ಸಾಲಿನಿಂದ ರಾಜ್ಯದಲ್ಲಿ ಅನುಷ್ಠಾನಗೊಂಡಿದೆ
ಕನಿಷ ೧೦ ದಿನಗಳಿಂದ ೩೦ ದಿನಗಳ ವರೆಗೆ ವಿವಿಧ ರೀತಿಯ ಸ್ವ ಉದ್ಯೋಗದ ಬಗ್ಗೆ ತರಬೇತಿ ನೀಡಲಾಗಿದೆ. ತರಬೇತಿ ಪಡೆದ ಫಲಾನುಭವಿಗಳಿಗೆ ಶಿಷ್ಯ ವೇತನ ನೀಡಲಾಗುತ್ತಿದೆ ಹಾಗೂ ತರಬೇತಿ ಪಡೆದವರಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆಯ ಯೋಜನೆಯ ವತಿಯಿಂದ ಹಾಗೂ ಬ್ಯಾಂಕಿನಿಂದ ಸಾಲ ನೀಡಿ ಘಟಕ ಪ್ರಾರಂಭಿಸಲು ಸಹಕಾರ ನೀಡಲಾಗುತ್ತಿದೆ.
೨೦೨೨-೨೩ ನೇ ರಾಜ್ಯ ಮಟ್ಟದ ಉತ್ತಮ ಸಾಧನೆಯ ಪ್ರಶಸ್ತಿಗೆ ರಾಯಚೂರು ಜಿಲ್ಲೆಯನ್ನು ಆಯ್ಕೆಯಾಗಿರುವ ಹಿನ್ನಲೆ ನಾಳೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಅವರು ಮುಖ್ಯಮಂತ್ರಿ ಕಡೆಯಿಂದ ಪ್ರಶಸ್ತಿ ಪ್ರಮಾಣ ಪತ್ರ ಸ್ವೀಕರಿಸಲಿದ್ದಾರೆ.

ಕೋಟ್: ಜಿಲ್ಲೆಗೆ ಈ ಪ್ರಶಸ್ತಿ ಲಭಿಸಿರುವುದು ನಮಗೆ ಖುಷಿ ತಂದಿದ್ದು, ಮುಂದಿನ ದಿನಮಾನದಲ್ಲಿ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕ ಹಾಗೂ ಪರಿಣಾಮಕಾರಿ ಅನುಷ್ಠಾನಗೊಳಿಸಲು ಪ್ರೇರೇಪಿಸಲಿದೆ. ಉನ್ನತಿ ಯೋಜನೆಯನ್ನು ಆಯೋಜಿಸುವಲ್ಲಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಎನ್.ಆರ್.ಎಲ್.ಎಮ್ ಹಾಗೂ ನರೇಗಾ ಐಇಸಿ ಸಿಬ್ಬಂದಿಗಳ ಸಹಕಾರವಿದೆ.
ಮಾನ್ಯ ಶ್ರೀ. ಶಶಿಧರ ಕುರೇರ್
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಜಿಲ್ಲಾ ಪಂಚಾಯತ ರಾಯಚೂರು.