ಸರಕಾರದ ಯೋಜನೆಗಳು ಎಲ್ಲರಿಗೂ ಸಮಾನವಾಗಿ ದೊರಕಬೇಕು: ಜಿಲ್ಲಾದಿಕಾರಿ ಡಾ. ಕೆ.ವಿ. ರಾಜೇಂದ್ರ

ಮಂಗಳೂರು, ನ.೧೧- ಆದಾಯೋತ್ಪನ್ನ ಚಟುವಟಿಕೆ, ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ  ತರಬೇತಿಯನ್ನು ಗ್ರಾಮೀಣ ಮಟ್ಟದಿಂದ ನಗರದವರೆಗೂ ಹೆಚ್ಚು ಪರಿಣಾಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾದಿಕಾರಿ ಡಾ. ಕೆ.ವಿ. ರಾಜೇಂದ್ರ ಹೇಳಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ದಮನಿತ ಮಹಿಳೆಯರ ಜಿಲ್ಲಾ ಮಟ್ಟದ ಸಲಹಾ ಸಮಿತಿ/ಕೋಶ ಸಮಿತಿ ಸಭೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಉಸ್ತುವಾರಿ ಕೋಶ ಸಭೆಯನ್ನುದ್ದೇಶಿಸಿ ಮಾತನಾಡಿದರು.

   ಉದ್ಯೋಗಿನಿ, ಚೇತನಾ, ಸಮೃದ್ಧಿ ಯೋಜನೆ, ಕಿರುಸಾಲ ಯೋಜನೆಯಡಿ ವಿವಿಧ ಚಟುವಟಿಕೆಗಳಿಗೆ ನಿಗದಿತ ಗುರಿಯಂತೆ ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ತಿಳಿಸಿದರು.

ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಹಾಗೂ ಅವರ ಅಗತ್ಯತೆಗಳನ್ನು ಪೂರೈಸಿಕೊಳ್ಳವ ನಿಟ್ಟಿನಲ್ಲಿ ಅವರದೇ ಸಮುದಾಯದವರ ನೆರವನ್ನು ಪಡೆದುಕೊಂಡು ಲಿಂಗತ್ವ ಅಲ್ಪಸಂಖ್ಯಾತರ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕು. ಪಟ್ಟಿಯ ಅನುಸಾರ  ಶಿಕ್ಷಣ, ಆರೋಗ್ಯ ಸೌಲಭ್ಯ, ಉದ್ಯೋಗಾವಕಾಶ, ವಸತಿ ನಿರ್ಮಾಣದಂತಹ ಇನ್ನಿತರ ಅಗತ್ಯತೆಗಳು ಯಾರಿಗೆ ಅತೀ ಅವಶ್ಯಕತೆ  ಇದೆ  ಎಂದು  ಆಯಾ ಇಲಾಖೆಗಳ ಅಧಿಕಾರಿಗಳು ಮಾಹಿತಿ ಕ್ರೋಢೀಕರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಭೆಗೆ ತಿಳಿಸಿದರು.

ಲಿಂಗತ್ವ ಅಲ್ಪಸಂಖ್ಯಾತರು ಸರ್ಕಾರದ ಎಲ್ಲಾ ಯೋಜನೆಗಳನ್ನು ಸದುಪಯೋಗ ಪಡೆಯುವಂತಾಗಬೇಕು. ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವಂತೆ ಹಾಗೂ ಮೈತ್ರಿ ಯೋಜನೆಯಡಿ ಪಿಂಚಣಿ ವಂಚಿತರಿದ್ದರೆ ಅವರ ಅರ್ಜಿಯನ್ನು ಪರಿಶೀಲಿಸಿ ಕ್ರಮ ವಹಿಸಿ ಎಂದು ಹೇಳಿದರು. 

ಸಭೆಯಲ್ಲಿ ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪಾಬೋವಿ, ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶಿಲ್ಪ ಎ.ಜೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಟ್ರೂಡ್ ವೇಗಸ್ ಮತ್ತಿತರರು ಉಪಸ್ಥಿತರಿದ್ದರು.