ಸರಕಾರದ ಯೋಜನೆಗಳನ್ನು ಪಡೆದು ಆರ್ಥಿಕ ಸದೃಢರಾಗಿ: ನ್ಯಾ. ಸತೀಶ

ಬ್ಯಾಡಗಿ, ನ14: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಡವರ್ಗದ ಜನರಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು, ಜನರು ಅವುಗಳ ಸದುಪಯೋಗವನ್ನು ಪಡೆದು ಆರ್ಥಿಕವಾಗಿ ಸದೃಢತೆಯನ್ನು ಹೊಂದಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಟಿ.ಸತೀಶ ಹೇಳಿದರು.
ಸ್ಥಳೀಯ ತಹಶೀಲದಾರ ಕಾರ್ಯಾಲಯದಲ್ಲಿ ಶನಿವಾರ ತಾಲೂಕಾ ಕಾನೂನು ಸೇವೆಗಳ ಸಮಿತಿ, ತಾಲೂಕಾ ನ್ಯಾಯವಾದಿಗಳ ಸಂಘ ಹಾಗೂ ತಹಶೀಲದಾರ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅರ್ಹ ಫಲಾನುಭವಿಗಳಿಗೆ ಸರಕಾರಿ ಯೋಜನೆಗಳ ಅರಿವು ಶಿಬಿರ ಹಾಗೂ ಮನೆ ಬಾಗಿಲಿಗೆ ನ್ಯಾಯ ಆಂದೋಲನ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರು ಸರ್ಕಾರದ ವೃದ್ಧಾಪ್ಯ ಯೋಜನೆ. ಸಂಧ್ಯಾ ಸುರಕ್ಷಾ ಹಾಗೂ ವಿಧವಾ ವೇತನ ಸೇರಿದಂತೆ ಇನ್ನಿತರೆ ಯೋಜನೆಗಳನ್ನು ಪಡೆಯಲು ಸಮರ್ಪಕವಾಗಿ ಕಂದಾಯ ಇಲಾಖೆಗೆ ದಾಖಲೆಗಳನ್ನು ಒದಗಿಸಿ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರಲ್ಲದೇ ವಿವಿಧ ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಿದರು.
ಮುಖ್ಯ ಅತಿಥಿಗಳಾದ ಸಿವಿಲ್ ನ್ಯಾಯಾಧೀಶರಾದ ಎಸ್.ಎಂ ಧನರಾಜ್ ಮಾತನಾಡಿ, ಬಡವರ್ಗದ ಜನರು ಕಾನೂನು ಸೌಲಭ್ಯಗಳ ಬಗ್ಗೆ ಅರಿವು ಪಡೆದುಕೊಳ್ಳುವ ಮೂಲಕ ಅವರಿಗಾಗಿಯೇ ಇರುವ ಉಚಿತ ಕಾನೂನು ಸೇವೆಯ ಸೌಲಭ್ಯದ ನೆರವನ್ನು ಹೊಂದಬೇಕು. ಲೋಕ್ ಅದಾಲತ್ ಮೂಲಕ ನ್ಯಾಯಾಲಯದಲ್ಲಿ ಅಥವಾ ಬೇರೆ ಕಛೇರಿಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿಕೊಳ್ಳಲು ಮುಂದೆ ಬರಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶೀಲದಾರ ರವಿಕುಮಾರ ಕೊರವರ ವಹಿಸಿದ್ದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಎಸ್. ಬಟ್ಟಲಕಟ್ಟಿ, ನ್ಯಾಯವಾದಿಗಳಾದ ಪಿ.ಸಿ.ಸಿಂಗಿ, ಪಿ.ಸಿ.ಸದಲಗಿ, ಲಕ್ಷ್ಮಿ ಗುಗ್ಗರಿ, ಭಾರತಿ ಕುಲಕರ್ಣಿ, ಸುರೇಶ ಕಾಟೇನಹಳ್ಳಿ, ಎಸ್.ಎಚ್.ಗುಂಡಪ್ಪನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.