ಸರಕಾರದ ಧೋರಣೆ ಖಂಡಿಸಿ ಸಾರಿಗೆ ನೌಕರರ ಮೌನ ಪ್ರತಿಭಟನೆ

ಧಾರವಾಡ,ಏ20 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಒಕ್ಕೂಟ ಕಳೆದ ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕ್ಯಾರೆ ಎನ್ನದೆ ನಿರ್ಲಕ್ಷಿಸಿರುವ ರಾಜ್ಯದ ಭ್ರಷ್ಟ ಬಿಜೆಪಿ ಸರಕಾರದ ಧೋರಣೆ ಖಂಡಿಸಿ ಸೋಮವಾರ ಧಾರವಾಡ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯ ಎದುರು ಸಾವಿರಾರು ನೌಕರರು ಮೌನ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಾರಿಗೆ ಸಂಸ್ಥೆಯ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಚ್.ನೀರಲಕೇರಿ ಮಾತನಾಡಿ, ಕಳೆದ 13 ದಿನಗಳಿಂದ ನೌಕರರು ತಮ್ಮ ನ್ಯಾಯಯುತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ವಿವಿಧ ರೂಪದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಆದರೆ ಸರಕಾರ ದಮನಕಾರಿ ನೀತಿ ಅನುಸರಿದುತ್ತಿದೆ. ರಾತ್ರೋರಾತ್ರಿ ವಸತಿ ನಿಲಯ ತೆರವುಗೊಳಿಸಲು ಒತ್ತಡ ಹೇರುವುದು, ಮಾರ್ಚ್ ತಿಂಗಳ ಸಂಬಳ ನೀಡದಿರುವುದು, ಖೊಟ್ಟಿ ಪ್ರಕರಣ ದಾಖಲಿಸುವುದು ಸರಿಯಲ್ಲ ಎಂದು ದೂರಿದರು.
ನಾವು ದೂರು ಕೊಟ್ಟರೆ ಅದನ್ನು ಸ್ವೀಕರಿಸುತ್ತಿಲ್ಲ. ಬದಲಿಗೆ ಪೆÇಲೀಸರನ್ನು ಮುಂದೆ ಬಿಟ್ಟು ಹೆದರಿಸುತ್ತಿರುವುದು ಯಾಕೆ? ಸರಕಾರ ಬೇಕಿದ್ದರೆ ಕಾನೂನಾತ್ಮಕ ಕ್ರಮ ಕೈಗೊಳ್ಳಲಿ ಅದನ್ನು ಎದುರಿಸಲು ನಾವು ಸಿದ್ದರಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಅವರ ಸಾರಿಗೆ ನೌಕರರ ಕುಟುಂಬದವರು ಕೂಡ ಮನೆಯಿಂದ ಹೊರಗೆ ಬಂದು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇತ್ತ ಸರಕಾರ ನೌಕರರ ವರ್ಗಾವಣೆ, ವಜಾಗೊಳಿಸುವುದು ಸೇರಿದಂತೆ ಕಾರ್ಮಿಕ ವಿರೋಧಿ ಕ್ರಮಗಳನ್ನು ಕೈಕೊಳ್ಳುತ್ತಿದೆ. ಇದಲ್ಲದೇ ಕಾರ್ಮಿಕರನ್ನು ಬೆದರಿಸಿ ಕರ್ತವ್ಯಕ್ಕೆ ನಿಯೋಜನೆ ಮಾಡುತ್ತಿದ್ದಾರೆ. ಇದಿಷ್ಟು ಸಾಲದೆಂಬಂತೆ ಕಾರ್ಮಿಕರ ಒಗ್ಗಟ್ಟು ಮುರಿಯುವ ಕುತಂತ್ರ ಮಾಡುತ್ತಿದೆ.
ಒಂದು ಕಡೆ ಕಾರ್ಮಿಕರ ಹಿತರಕ್ಷಣೆಯ ಜವಾಬ್ದಾರಿ ನಿರ್ವಹಿಸದ ಸರಕಾರ, ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲವನ್ನು ಅಲಕ್ಷಿಸಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಮಿಕರ ಹೋರಾಟವನ್ನು ಗೌರವಿಸಬೇಕಿದ್ದ ಸರಕಾರ, ತನ್ನ ಹಠಮಾರಿ ಧೋರಣೆ ಬಿಡುತ್ತಿಲ್ಲ ಎಂದು ಆರೋಪಿಸಿದರು.
ಸರಕಾರದ ಕಾರ್ಮಿಕ ಮತ್ತು ಜನವಿರೋಧಿ ನೀತಿಯನ್ನು ಖಂಡಿಸಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಪಿ.ಎಚ್. ನೀರಲಕೇರಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಶ್ರೀಶೈಲ ಗೌಡ್ರು ಕಮತರ, ಶಿದ್ದನ್ನ ಕಂಬಾರ, ಲಕ್ಷ್ಮಣ್ ಬಕ್ಕಾಯಿ ಜೊತೆಗಿದ್ದರು