ಸರಕಾರದ ಕ್ರಮ, ಜನರ ಸಹಕಾರದಿಂದ ಕೋವಿಡ್ ನಿಯಂತ್ರಣ: ಅಷ್ಠಗಿ

ಕಲಬುರಗಿ,ಮೇ.27-ಕಳೆದ ಫೆಬ್ರವರಿ ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಕಡಿಮೆ ಆಗಿದ್ದವು. ಪಾಸಿಟಿವಿಟಿ ದರ ಶೇ% 0.58ಕ್ಕೆ ಬಂದಿತ್ತು. ಆದರೆ ಏಕಾಏಕಿ ಚಂಡಮಾರುತದ ರೀತಿಯಲ್ಲಿ ಮಾರ್ಚ್ 15 ರ ವೇಳೆಗೆ ಪ್ರಕರಣಗಳು ಹೆಚ್ಚಿದವು. ಒಂದು ಸಂದರ್ಭದಲ್ಲಿ ಪಾಸಿಟಿವಿಟಿ ದರ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ಈ ಹಂತದಲ್ಲಿ ರಾಜ್ಯ ಸರಕಾರದ “ಜನತಾ ಕರ್ಫ್ಯೂ ಮತ್ತು ಲಾಕ್‍ಡೌನ್” ನ ಪರಿಣಾಮವಾಗಿ ಪಾಸಿಟಿವಿಟಿ ದರ ಶೇ% 20 ಕ್ಕಿಂತ ಕಡಿಮೆ ಆಗಿದೆ. ಲಾಕ್‍ಡೌನ್ ವಿಚಾರದಲ್ಲಿ ಜನರ ಸಹಕಾರದಿಂದ ಪಾಸಿಟಿವಿಟಿ ದರ ಇನ್ನಷ್ಟು ಕಡಿಮೆ ಆಗಲಿದ್ದು, ಕೊರೋನಾ ತೀವ್ರವಾಗಿ ಇಳಿಮುಖವಾಗಲಿದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೋವಿಡ-19 ಪಾಸಿಟಿವಿಟಿ ದರ ಶೇ% 5 ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಬೇಕಿದೆ. ಇದರಿಂದ ವೈದ್ಯಕೀಯ ರಂಗವು ಹೆಚ್ಚು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಿದೆ.
2020 ರಿಂದ ಇಲ್ಲಿಯವರೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಅವಿಶ್ರಾಂತವಾಗಿ ಕೆಲಸ ಮಾಡಿರುವ ವೈದ್ಯಕೀಯ-ಅರೆ ವೈದ್ಯಕೀಯ, ಪೋಲಿಸ್ ಮತ್ತು ಇತರೆ ಇಲಾಖೆಯ ಸಿಬ್ಬಂದಿಗಳ ಸೇವೆ ಈ ಪ್ರಕರಣಗಳ ಸಂಖ್ಯೆ ಕಡಿಮೆ ಆಗುವುದರಲ್ಲಿ ಪ್ರಮುಖಪಾತ್ರ ವಹಿಸಿದೆ. ಆಕ್ಸಿಜನೇಟೆಡ್ ಬೆಡ್ 2020 ರಲ್ಲಿ ಸುಮಾರು ಒಂದು ಸಾವಿರ ಇದ್ದದ್ದು ಈಗ 24 ಸಾವಿರಕ್ಕೆ ಏರಿಕೆಯಾಗಿ ಅಭೂತಪೂರ್ವ ಬೆಳವಣಿಗೆ ಎನಿಸಿದೆ. ಸೂಮಾರು 444 ವೆಂಟಿಲೇಟರ್ ಇದ್ದದ್ದು ಈಗ ಸುಮಾರು 2 ಸಾವಿರಕ್ಕೆ ಏರಿಕೆಯಾಗಿವೆ. ಆಕ್ಸಿಜನ್ ನಿರ್ವಹಣೆ ಮತ್ತು ಸರಬರಾಜಿನಲ್ಲಿ ಸ್ವಲ್ಪ ಸಮಸ್ಯೆ ಇತ್ತು. ಈಗ ಅದು ಸರಿಹೊಂದಿದೆ . ನಿನ್ನೆವರೆಗೆ 850 ಮೆಟ್ರಿಕ್ ಟನ್ ಆಮ್ಲಜನಕವಷ್ಟೇ ಬಳಸಲಾಗಿದೆ. ಬೆಳಿಗ್ಗೆ 6 ರಿಂದ 10 ಗಂಟೆ ರವರೆಗೆ ಜನರಿಗೆ ಲಾಕ್‍ಡೌನ್ ವಿಷಯದಲ್ಲಿ ವಿರಾಮ ನೀಡಲಾಗಿದೆ.ಆದರೆ, ವೈರಸ್‍ಗೆ ವಿರಾಮ ಇಲ್ಲ ಎಂಬುದನ್ನು ಜನರು ನೆನಪಿನಲ್ಲಿ ಇಡಬೇಕು ಎಂದು ಅಷ್ಠಗಿ ಹೇಳಿದ್ದಾರೆ. ಮನೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ವಾರಕ್ಕೊಮ್ಮೆ ಖರೀದಿ ಮಾಡಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಜೂನ್ ಮೊದಲ ವಾರದಲ್ಲಿ ಇನ್ನಷ್ಟು ಕೋವಿಡ್ ಲಸಿಕೆ ಸಿಗಲಿದೆ. ಸ್ಫುಟ್ನಿಕ್-ವಿ ಲಸಿಕೆ ಬಗ್ಗೆ ಅಧ್ಯಯನ ನಡೆಸಿದ ಬಳಿಕ ಲಸಿಕೆ ಕೊಡಲಾಗುತ್ತಿದೆ. ಭಾರತದಲ್ಲಿ ಲಸಿಕೆ ಹಾಕುವುದೆಂದರೆ ಅದು ಪ್ರಪಂಚದ ಶೇ.33 ಜನರಿಗೆ ಲಸಿಕೆ ಕೊಡುವಂಥ ಅತಿ ದೊಡ್ಡ ಕಾರ್ಯಕ್ರಮ. ದೇಶದ ಸುಮಾರು 20 ಕೋಟಿ ಜನರಿಗೆ ಮತ್ತು ಕರ್ನಾಟಕದ 1.2 ಕೋಟಿ ಜನರಿಗೆ ಈಗಾಗಲೇ ಲಸಿಕೆ ಕೊಡಲಾಗಿದೆ. ಲಸಿಕೆ ಪಡೆದುಕೋಂಡವರು ಕೋರೊನಾ ಬಂದರೂ ಪ್ರಾಣಾಪಾಯದಿಂದ ಪಾರಾಗುತ್ತಿದ್ದಾರೆ. ಸೋಂಕಿತರ ಸಂಖ್ಯೆ ನಿರಂತರವಾಗಿ ಕಡಿಮೆ ಆಗುತ್ತಿದೆ. ಅಲ್ಲದೆ, ಚಿಕಿತ್ಸೆ ಪಡೆದು ಗುಣಮುಖರಾಗುವವರ ಸಂಖ್ಯೆಯೂ ಹೆಚ್ಚುತ್ತಿದೆ ಇದು ಆಶಾದಾಯಕ ಬೆಳವಣಿಗೆಯಾಗಿದೆ. ಬಿಜೆಪಿಯ ಲಕ್ಷಾಂತರ ಕಾರ್ಯಕರ್ತರು ತಮ್ಮ ಪ್ರಮಾಣವನ್ನು ಪಣಕಿಟ್ಟು ಕೊರೋನಾ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸೇವೆಯ ವೇಳೆ ನಮ್ಮ ಅನೇಕ ಕಾರ್ಯಕರ್ತರನ್ನು ನಾವು ಕಳೆದುಕೊಂಡಿದ್ದೇವೆ. ಆದರೆ, ವಿರೋಧ ಪಕ್ಷಗಳು ಕೋವಿಡ್ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿರುವುದು ದುರ್ದೈವದ ಸಂಗತಿ ಎಂದು ಅಷ್ಠಗಿ ಹೇಳಿದ್ದಾರೆ.
“ಸೇವೆಯೇ ಸಂಘಟನೆ” ಎಂಬ ಕಾರ್ಯಕ್ರಮದಡಿಯಲ್ಲಿ ದೇಶಲ್ಲೆಡೆ ಬಿಜೆಪಿ ಕೋರೊನಾ ವಿರುದ್ಧ ಆಂದೋಲನ ನಡೆಸುತ್ತಿದೆ. ಬೆಡ್ ಸಿಗದವರು, ಆಮ್ಲಜನಕ ಸಿಗದೆ ಇರುವವರು, ವಿವಿಧ ವೈದ್ಯಕೀಯ ಸೌಕರ್ಯಕ್ಕಾಗಿ ಪ್ರಯತ್ನ ಪಡುವವರ ನೆರವಿಗೆ ಬಿಜೆಪಿ ಕಾರ್ಯಕರ್ತರು ಧಾವಿಸುತ್ತಿದ್ದಾರೆ. ಊಟದ ಕಿಟ್ ಕೂಡ ವಿತರಿಸಲಾಗುತ್ತಿದೆ. ಆದರೆ ಕೋರೊನಾ ವಿರುದ್ಧ ಜಾಗೃತಿ ಮೂಡಿಸುವುದನ್ನು ಬಿಟ್ಟು ಈ ರೋಗಕ್ಕೆ ಪ್ರಧಾನಿಯವರನ್ನು ದೂರುವ ವಿರೋಧ ಪಕ್ಷಗಳ ಪರಿಪಾಠ ಈಗಲೂ ಮುಂದುವರಿದಿರುವುದು ವಿಪರ್ಯಾಸ ಎಂದು ಅಂಬಾರಾಯ ಅಷ್ಠಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಪರಿಹಾರಕ್ಕೆ ಸಹಕರಿಸುವ ಪ್ರವೃತ್ತಿ ಮತ್ತು ಜನಜಾಗೃತಿ ಮೂಡಿಸುವಲ್ಲಿ ವಿರೋಧ ಪಕ್ಷಗಳು ನೆರವಾಗಬೇಕಿದೆ. ಪಟ್ಟಣ ಪ್ರದೇಶದಿಂದ ಹಳ್ಳಿಗಳಿಗೆ ಕೋವಿಡ್ 19 ಹರಡಿದೆ. ಜನರಿಗೆ ಧೈರ್ಯ ತುಂಬುವ ಕಾರ್ಯ ನಡೆಯಬೇಕಿ ರುವುದು ಇಂದಿನ ಆದ್ಯತೆ ಆಗಬೇಕು ಎಂದು ಅವರು ಹೇಳಿದ್ದಾರೆ.
ಜ್ಯೋತಿ ಬೆಳಗಿಸಿದ್ದು, ಚಪ್ಪಾಳೆ ತಟ್ಟಿದ್ದು ಕೊರೊನಾ ಹೋಗುತ್ತದೆ ಎಂದಲ್ಲ. ಕೋರೊನಾ ಸೇನಾನಿಗಳಿಗೆ ಪ್ರೋತ್ಸಾಹ ಕೊಡಲು ಈ ಕೆಲಸ ಮಾಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ .ಮೊದಲ ಹಂತದಲ್ಲಿ ಕಾಂಗ್ರೆಸ್ ಪಕ್ಷದವರು ಲಸಿಕೆ ಬಗ್ಗೆ ಜೀವಭಯ ಮೂಡಿಸಿದ್ದರು. ಈಗ ಲಸಿಕೆ ಪ್ರಯೋಜನಕಾರಿ ಎಂಬುದು ಅವರಿಗೂ ಅರ್ಥವಾಗಿದೆ. ಸುಳ್ಳು ಮತ್ತು ಅಪಪ್ರಚಾರದ ಮೂಲಕ ಜನರ ದಾರಿ ತಪ್ಪಿಸುವ ಕಾರ್ಯವನ್ನು ಇನ್ನಾದರೂ ವಿರೋಧ ಪಕ್ಷಗಳು ಬಿಡಬೇಕು ಎಂದು ಅಷ್ಠಗಿ ಆಗ್ರಹಿಸಿದ್ದಾರೆ.
ಆಕ್ಸಿಜನ್ ಕೊರತೆ ನೀಗಿಸಲಾಗಿದೆ, ಹಾಸಿಗೆಗಳ ಸಂಖ್ಯೆ ಮತ್ತು ಲಭ್ಯತೆ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಪ್ಲಾಸ್ಮಾದ ಕೊರತೆಯನ್ನೂ ಸರಿಪಡಿಸಲಾಗಿದೆ. ಬ್ಲ್ಯಾಕ್ ಫಂಗಸ್‍ಗೆ ಕೂಡ ಚಿಕಿತ್ಸೆ ಲಭ್ಯವಿದ್ದು ಇದು ರೋಗಿಗಳಿಗೆ ಸಹಕಾರಿಯಾಗಲಿದೆ. ಪಾಸಿಟಿವ್ ದರ ಕಡಿಮೆಯಾಗುತ್ತಿದ್ದು,ಲಸಿಕೆ ಅಭಿಯಾನ ಪ್ರಗತಿಯಲ್ಲಿದೆ. ಬೇಡಿಕೆ ಮತ್ತು ಸರಬರಾಜಿನಲ್ಲಿ ಸ್ವಲ್ಪ ಏರಿಳಿತ ಸಂಭವಿಸಿದ ಕಾರಣ ಅದು ಸಮಸ್ಯೆಯಂತೆ ಕಾಣುತ್ತಿದೆ. ಹಿಂದೆ ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಕರೆಯುವ ಸ್ಥಿತಿ ಇತ್ತು. ಆದರೆ ಈಗ ಲಸಿಕೆ ಹಾಕಿಕೊಳ್ಳಲು ಜನ ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ. ದೇಶದಲ್ಲಿ ವ್ಯಾಕ್ಸಿನ್‍ ಜನರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಬಿಜೆಪಿಯಿಂದ ಲಸಿಕೆ ಅಭಿಯಾನ ಮುಂದುವರಿದಿದೆ. ಜೂನ್ ಮೊದಲ ವಾರದಿಂದ ಈ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅಷ್ಠಗಿ ಹೇಳಿದ್ದಾರೆ.
ಈ ವರ್ಷ ಕಡಿಮೆ ವಯಸ್ಸಿನವರಿಗೆ ಕೋವಿಡ್ ತಗುಲುತ್ತಿದೆ, ಹೆಚ್ಚು ದಿನಗಳ ಕಾಲ ವೆಂಟಿಲೇಟರ್ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಮರಣ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ರೋಗಿಗಳು ಮನೆಯಲ್ಲೇ ಇರುವುದು, ಸರಿಯಾಗಿ ಚಿಕಿತ್ಸೆ ಪಡೆಯದೆ ಇರುವುದರಿಂದ ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದರು. ರೋಗಿಗಳು ಪರೀಕ್ಷೆ ಮಾಡಿಸಬೇಕು. ಭಯ ಮತ್ತು ಆತಂಕ ದೂರವಿಟ್ಟು ಕೋರೊನಾ ಗೆಲ್ಲಬೇಕೇಂದು ಧೈರ್ಯ ಸಾರ್ವಜನಿಕರಿಗೆ ಧೈರ್ಯ ಹೇಳಿದ್ದಾರೆ
ಸರಕಾರವು ಆರೋಗ್ಯ-ಪೋಲೀಸ ಸಿಬ್ಬಂದಿಗಳಿಗೆ ಆದ್ಯತೆ ಮೇರೆಗೆ ಕೋವಿಡ-19 ಲಸಿಕೆ ಕೊಟ್ಟ ಕಾರಣ ಸಿಬ್ಬಂದಿಯ ಕೊರತೆ ಆಗಲಿಲ್ಲ. ಅವರೆಲ್ಲರೂ ಧೈರ್ಯದಿಂದ ಕರ್ತವ್ಯ ನಿರತರಾಗಿದ್ದಾರೆ. ಕೋರೊನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಇನ್ನು ಹೆಚ್ಚು ನಡೆಯಬೇಕಿದೆ,ಯಾವುದೇ ಕಾರಣಕ್ಕೂ ಅಲಕ್ಷ್ಯ ಮಾಡಿದೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದು ಆರೋಗ್ಯಕರ ಸಮಾಜವನ್ನು ಮತ್ತೊಮ್ಮೆ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಅದಕ್ಕಾಗಿ ಕೊರೋನಾ ಹೊಡೆದೋಡಿಸುವ ಮತ್ತು ಸಶಕ್ತ ರಾಷ್ಟ್ರ ನಿರ್ಮಾಣ ಮಾಡುವ ಸಂಕಲ್ಪ ಮಾಡೋಣ ಎಂದು ಅಂಬಾರಾಯ ಅಷ್ಠಗಿ ಹೇಳಿದ್ದಾರೆ.