ಸರಕಾರದ ಕಾರ್ಯಕ್ರಮಗಳು ಸ್ಥಳೀಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರಬೇಕು: ಡಿ. ರಂದೀಫ್

ಬೀದರ:ಜ.24: ಸರಕಾರದ ಹಲವಾರು ಕಾರ್ಯಕ್ರಮಗಳು ಜಿಲ್ಲಾ. ತಾಲ್ಲೂಕು. ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಿ. ರಂದೀಫ್ ಹೇಳಿದರು.
ಅವರು ಸೋಮವಾರ ಬೀದರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಜಿಲ್ಲಾ ಮಟ್ಟದಲ್ಲಿಯು ಸ್ಥಳೀಯವಾಗಿ ಸಮಸ್ಯೆಗಳಿದ್ದರೆ ಅವುಗಳನ್ನು ನಮ್ಮ ಗಮನಕ್ಕೆ ತರಬೇಕು ಮತ್ತು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಈ ಸರ್ಕಾರದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.
ಪ್ರತಿ ತಿಂಗಳು ಕ್ಷೇತ್ರ ಭೇಟಿಯ ಜೊತೆಗೆ ಆಧ್ಯತೆಯ ಮೇಲೆ ಜಿಲ್ಲೆಯ ವಿಷಯಗಳನ್ನು ಗಮನಕ್ಕೆ ತರಬೇಕು ಎನ್ನುವುದು ಮುಖ್ಯ ಮಂತ್ರಿಗಳ ನಿರ್ದೆಶನ ಇದೆ ಅವರು ಜನವರಿ 31 ಕ್ಕೆ ರಿವಿವ್ ಮಾಡುತ್ತಾರೆ. ತಮ್ಮ – ತಮ್ಮ ಇಲಾಖೆಗಳ ಮಾಹಿತಿಯನ್ನು ನೀಡುವದರ ಜೊತೆಗೆ ಜಿಲ್ಲೆಯಲ್ಲಿ ಆಗಿರುವ ಉತ್ತಮ ಕೆಲಗಳ ಬಗ್ಗೆ ತಿಳಿಸಬೇಕು ಎಂದರು.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಎಷ್ಟಿದೆ ಕಳೆದ ಐದು ವರ್ಷಗಳ ಮಾಹಿತಿ ನೀಡಿ ಮತ್ತು ಸಧ್ಯದ ಫಲಿತಾಂಶದ ಹೆಚ್ಚಳಕ್ಕಾಗಿ ಯಾವ ಯೋಜನೆ ರೂಪಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೆಶಕರಿಗೆ ಉಸ್ತುವಾರಿ ಕಾರ್ಯದರ್ಶಿಗಳು ಕೇಳಿದಾಗ ಕೆಲವು ಶಾಲೆಗಳು ದತ್ತು ಕೊಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಕೆಲವು ಅಧಿಕಾರಿಗಳನ್ನು ನೇಮಿಸಲಾಗಿದೆ. ವಿಷಯ ಪರಿಣಿತ ಶಿಕ್ಷಕರನ್ನು ಕರೆಸಿ ಮಕ್ಕಳಿಗೆ ಕಲಿಸುವ ಟಿಪ್ಸಗಳನ್ನು ಶಿಕ್ಷಕರಿಗೆ ಹೇಳಲಾಗುತ್ತಿದೆ. ಕೆ.ಕೆ.ಆರ್.ಡಿ.ಬಿಯಿಂದ ಸಮಾಲೋಚಕರನ್ನು ನೇಮಕಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆಮಾಡುವ ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಇಲ್ಲಿಯವರೆಗೆ ಯಾವುದೇ ಒಂದು ಪ್ರಕರಣ ಯಾಕೆ ದಾಖಲಾಗಿಲ್ಲ. ಸ್ಕಾನಿಂಗ್ ಕೇಂದ್ರಗಳ ದಾಖಲಾತಿಗಳನ್ನು ಸರಿಯಾದ ಪರಿಶೀಲನೆ ಮಾಡಬೇಕು ಮತ್ತು ಡೀಫ್ ಆಪರೇಷನ್ ಮಾಡಿದಾಗ ಇಂಥಹ ಪ್ರಕರಣಗಳು ಬೆಳಕಿಗೆ ಬರುತ್ತವೆ.
ಗಡಿ ಜಿಲ್ಲೆಗಳಲ್ಲಿ ಇದಕ್ಕೆ ಒತ್ತು ನೀಡಬೇಕಿದೆ ಹಾಗೂ ರಿಜಿಸ್ಟ್ರೇಶನ್ ಇಲ್ಲದೆ ಕೆಲಸ ನಿರ್ವಹಿಸುವ ನಕಲಿ ವೈದ್ಯರು ಕೆಲಸ ನಿರ್ವಹಿಸುವವರು ಕಂಡು ಬಂದರೆ ಅಂಥವರ ಮೇಲೆ ಕ್ರಮ ಜರುಗಿಸಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗೆ ಸೂಚಿಸಿದ ಅವರು ಪುಡ್ ಸೇಪ್ಟಿ ಅಧಿಕಾರಿಗಳು ಹೋಟೆಲಗಳಲ್ಲಿ ಗುಣಮಟ್ಟದ ಆಹಾರ ಕೊಡುತ್ತಿಲ್ಲ ಎಂಬ ದೂರುಗಳಿದ್ದು ಅವುಗಳ ಬಗ್ಗೆ ಪರಿಶೀಲನೆ ನಡೆಸಬೇಕೆಂದು ಹೇಳಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಕುರಿತ ಮಾಹಿತಿಯನ್ನು ಸಂಬಂಧಿಸಿದ ಇಲಾಖೆಯ ಆದಿಕಾರಿಗಳಿಂದ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಮಾತನಾಡಿ ಬಸವಕಲ್ಯಾಣದಲ್ಲಿ ಅನುಭವ ಮಂಟಪದ ಕಾಮಗಾರಿ ನಡೆಯುತ್ತಿದೆ. ಭಾಲ್ಕಿ ಹಾಗೂ ಔರಾದನಲ್ಲಿ ಲಿಪ್ಟ್ ಇರಿಗೇಷನ್ ಕಾಮಗಾರಿಗಳು ನಡೆಯುತ್ತಿವೆ. ಹುಲಸೂರು. ಕಮಲನಗರ ಹಾಗೂ ಚಿಟಗುಪ್ಪಾ ಹೊಸ ತಾಲ್ಲೂಕುಗಳಿಗೆ ತಾಲ್ಲೂಕು ಆಡಳಿತ ಭವನ ಆಗಬೇಕಿದೆ ಎಂಬ ಮಾಹಿತಿಯನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಬೀದರ ಸಹಾಯಕ ಆಯುಕ್ತರಾದ ಲವೀಶ್ ಓರ್ಡಿಯಾ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಮೇಶ ಕೋಲಾರ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಉಪನಿರ್ದೆಶಕರಾದ ಸುರೇಖಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೆಶಕರಾದ ಪ್ರಭಾಕರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಸಿಂಧು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಜ್ಞಾನೇಶ್ವರ ನಿರಗುಡಿ ಸೇರಿದಂತೆ ವಿವಿಧ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.