ಸರಕಾರದ ಆರ್ಥಿಕ ಸವಲತ್ತುಗಳನ್ನು ಲ್ಯಾಂಪ್ಸ್ ಸಹಕಾರ ಸಂಸ್ಥೆಗಳು ಸದುಪಯೋಗ ಪಡಿಸಿಕೊಳ್ಳಬೇಕು – ಡಾ.ಎಂ.ಎನ್.ರಾಜೇಂದ್ರ ಕುಮಾರ್

ಮಂಗಳೂರು, ಜ.೧೪- ಲ್ಯಾಂಪ್ಸ್ ಸಹಕಾರಿ ಸಂಘಗಳು ಪರಿಶಿಷ್ಟ ಪಂಗಡಗಳ ಜನಾಂಗದ ಹಿತಸಕ್ತಿಗೆ ಪೂರಕವಾದ ಉದ್ದೇಶದಿಂದ ಅವರನ್ನು ಸಂಘಟಿಸಿ, ಅಭಿವೃದ್ಧಿಯ ಯೋಜನೆ ರೂಪಿಸುವ ಕಾರ್ಯ ನಿರ್ವಹಿಸಬೇಕು. ಸಹಕಾರ ಇಲಾಖೆ ಮೂಲಕ ಸರಕಾರದಿಂದ ದೊರೆಯುವ ಆರ್ಥಿಕ ಯೋಜನೆಗಳನ್ನು ಸದುಪಯೋಗ ಪಡಿಸಿ ಸೂಕ್ತ ಫಲಾನುಭಾವಿಗಳಿಗೆ ತಲುಪಿಸುವ ಕೆಲಸವನ್ನು ಲ್ಯಾಂಪ್ಸ್ ಸಹಕಾರ ಸಂಸ್ಥೆಗಳು ಮಾಡಬೇಕೆಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ಅವರು ಎಸ್ ಸಿಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಲ್ಯಾಂಪ್ಸ್ ಸಹಕಾರ ಸಂಘಗಳಿಗೆ ಹಾಗೂ ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರಿ ಮಹಾಮಂಡಳಕ್ಕೆ ಮಂಜೂರಾದ ಅನುದಾನದ ಸದ್ಭಳಕೆ ಬಗ್ಗೆ ಪ್ರಗತಿ ಪರಿಶೀಲನಾ ಸಭೆಯ ಉದ್ಘಾಟನೆ ನೇರವೇರಿಸಿ ಮಾತನಾಡಿದರು.

ಸಾಮಾಜಿಕ ಸ್ಥಿತಿಗತಿ ಸುಧಾರಣೆ: ಜಿಯಾವುಲ್ಲಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದ  ಸಹಕಾರ ಇಲಾಖೆಯ ನಿಬಂಧಕರಾದ ಶ್ರೀ ಜಿಯಾವುಲ್ಲಾ ಅವರು ಮಾತನಾಡಿ, ಲ್ಯಾಂಪ್ಸ್ ಸಹಕಾರ ಸಹಕಾರಿ ಸಂಘಗಳ ಮೂಲಕ ಪರಿಶಿಷ್ಟ ಪಂಗಡಗಳ ಜನಾಂಗದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಸುಧಾರಣೆಯಾಗಿದೆ. ಲ್ಯಾಂಪ್ಸ್ ಸಂಘಗಳಿಗೆ  ಸರಕಾರದಿಂದ ವಿಶೇಷ ಅನುದಾನಗಳು ಸಹಕಾರ ಇಲಾಖೆ ಮೂಲಕ ನೀಡಲಾಗಿದ್ದು,ಈ ಅನುದಾನಗಳ ಸದ್ಬಳಕೆಯ ಪ್ರಗತಿ ಕುರಿತು ಪರಿಶೀಲನಾ ಸಭೆ ನಡೆದಿದೆ ಎಂದರು.

ಸಮಾರಂಭದಲ್ಲಿ  ಸಹಕಾರ ಸಂಘಗಳ ಅಪರ ನಿಬಂಧಕರಾದ ಶ್ರೀ ಸಿ.ಎನ್.ದೇವರಾಜ್,  ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಶ್ರೀ ಪ್ರಕಾಶ್ ರಾವ್,ಮೈಸೂರು ವಿಭಾಗದ ಸಹಕಾರ ಸಂಘಗಳ ಉಪನಿಬಂಧಕರುಗಳಾದ ಶ್ರೀ ಬಿ.ಕೆ.ಸಲೀಂ,ಶ್ರೀ ಪ್ರವೀಣ್ ಬಿ ನಾಯಕ್, ಶ್ರೀ ವಿಜಯಕುಮಾರ್ ಹಾಗೂ ವಿಕ್ರಮರಾಜ್ ಅರಸ್ ಹಾಗೂ  ಎಸ್ ಸಿಡಿಸಿಸಿ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ  ಶ್ರೀ ರವೀಂದ್ರ ಬಿ.  ಉಪಸ್ಥಿತರಿದ್ದರು. ಸಭೆಯಲ್ಲಿ ಮೈಸೂರು ವಿಭಾಗದ ಲ್ಯಾಂಪ್ಸ್ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು.