ಸರಕಾರದಿಂದ ಹೆಚ್ಚುವರಿ ಪರಿಹಾರ ಮಂಜೂರು

ಭಾಲ್ಕಿ:ಆ.24: ತಾಲೂಕಿನಲ್ಲಿ ಕಳೆದ ಜುಲೈ ಕೊನೆಯ ವಾರದಲ್ಲಿ ಮನೆ ಕುಸಿತ ಕಂಡ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪರಿಹಾರ ಧನದ ತಿಳುವಳಿಕೆ ಪತ್ರ ವಿತರಿಸಿದರು.

ಪಟ್ಟಣದ ತಹಸೀಲ್ ಕಚೇರಿಯಲ್ಲಿ ಬುಧವಾರ 94 ಸಂತ್ರಸ್ತರಿಗೆ ಸಚಿವರು ತಿಳುವಳಿಕೆ ಪತ್ರ ನೀಡಿ, ತಾಲೂಕಿನಲ್ಲಿ ಕಳೆದ ಜುಲೈ ಕೊನೆಯ ವಾರದಲ್ಲಿ ಮಳೆ ಸುರಿದು ಹಲವು ಮನೆಗಳು ಕುಸಿತ ಕಂಡು ಜನರು ಸಂಕಷ್ಟ ಅನುಭವಿಸಿದರು.

ಅಧಿಕಾರಿಗಳಿಗೆ ಸೂಚಿಸಿ ಸಮೀಕ್ಷೆ ನಡೆಸಿ ಸರಕಾರದಿಂದ 94 ಫಲಾನುಭವಿಗಳಿಗೆ ಪರಿಹಾರ ಧನ ಮಂಜೂರು ಮಾಡಿಸಿದ್ದೇನೆ. ಒರ್ವ ಫಲಾನುಭವಿಯ ಮನೆ ಸಂಪೂರ್ಣ ಕುಸಿತ ಕಂಡಿದ್ದು ಅವರಿಗೆ 1.20 ಲಕ್ಷ ರೂ ಮತ್ತು ಉಳಿದ 93 ಫಲಾನುಭವಿಗಳಿಗೆ ತಲಾ 50 ಸಾವಿರ ರೂ ಪರಿಹಾರ ಧನ ಮಂಜೂರು ಮಾಡಿಸಿದ್ದೇನೆ. ಈ ಹಿಂದೆ ಸರಕಾರದಿಂದ ಪರಿಹಾರ ಧನ ಕೇವಲ 5 ಸಾವಿರ ರೂ ಮಾತ್ರ ನೀಡಲಾಗುತ್ತಿತ್ತು. ಆದರೆ ಸಚಿವ ಸಂಪುಟದಲ್ಲಿ ಚರ್ಚಿಸಿ ಹೆಚ್ಚುವರಿ ಪರಿಹಾರ ಮಂಜೂರು ಮಾಡಿಸಿದ್ದೇನೆ. ಒಂದೆರಡು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲಿದೆ ಅದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ಉಪ ತಹಸೀಲ್ದಾರ ಗೋಪಾಲ ಹಿಪ್ಪರಗಿ, ಸಹಾಯಕ ಕೃಷಿ ನಿರ್ದೇಶಕ ಪಿ.ಎಂ.ಮಲ್ಲಿಕಾರ್ಜುನ ಇದ್ದರು.