ಸಮ ಸಮಾಜದ ಕಲ್ಪನೆ ಜನರಲ್ಲಿ ಬಿತ್ತಿದವರು ಬಸವಣ್ಣ

ಭಾಲ್ಕಿ:ಎ.26:ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು 12ನೇ ಶತಮಾನದಲ್ಲೇ ಜನ ಸಾಮಾನ್ಯರಿಗೆ ತಿಳಿಸಿಕೊಟ್ಟು ಸಮ ಸಮಾಜದ ಕಲ್ಪನೆಯನ್ನು ಜನಮಾನಸದಲ್ಲಿ ಬಿತ್ತಿದ ಮಹಾನುಭಾವರು ಬಸವಣ್ಣ ಎಂದು ಸಿದ್ದಗಂಗಾ ಶ್ರೀ ಸ್ಮಾರಕ ಸೇವಾ ಸಮಿತಿ, ಹಳೇ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಪಾಟೀಲ ತೇಗಂಪೂರ ಹೇಳಿದರು.
ತಾಲ್ಲೂಕಿನ ತೇಗಂಪೂರ ಗ್ರಾಮದಲ್ಲಿ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ ಹಾಗೂ ಹಿತೈಷಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ, ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಕಾಲದಲ್ಲಿಯೂ ಎಲ್ಲ ವರ್ಗದ ಜನರಿಗೆ ತಿಳಿಯುವಂತೆ ಬಸವಣ್ಣನವರು ವಿಜ್ಞಾನದಿಂದ ಆರೋಗ್ಯದವರೆಗಿನ ಎಲ್ಲ ವಿಷಯಗಳನ್ನು 12ನೇ ಶತಮಾನದಲ್ಲಿಯೇ ಹೇಳಿರುವುದು ಅವರ ವಿಶಿಷ್ಟ ಚಿಂತನಾತ್ಮಕತೆ, ಬುದ್ಧಿವಂತಿಕೆ ಎಂತಹುದು ಎಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ಜಾತ್ಯಾತೀತ ಪರಿಕಲ್ಪನೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಅರಿತಿದ್ದ ಬಸವಣ್ಣ ಜಾತೀಯತೆ, ಅಸಮಾನತೆ, ಬಡತನ, ದಾರಿದ್ರ್ಯವನ್ನು ಹೊಡೆದೋಡಿಸಲು ಸಾಕಷ್ಟು ಶ್ರಮಿಸಿದ್ದರು ಎಂದು ಹೇಳಿದರು.
ನಮ್ಮ ಸಮಾಜ ಮಾದರಿ ಪಥದಲ್ಲಿ ಚಲಿಸಲು ಎಲ್ಲರೂ ಇವನಾರವ, ಇವನಾರವ ಎಂದೆನಿಸದೆ, ಇವನಮ್ಮವ, ಇವನಮ್ಮವ ಎಂದೆನಿಸಯ್ಯ, ಕಾಯಕವೇ ಕೈಲಾಸ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಸಾರ್ವತ್ರಿಕ ಸತ್ಯವಾದ ಅಮೂಲ್ಯ ಮಂತ್ರಗಳನ್ನು ಚಾಚೂ ತಪ್ಪದೇ ಪಾಲಿಸಬೇಕಾಗಿದೆ ಎಂದು ತಿಳಿಸಿದರು.
ಹಲಬರ್ಗಾ ಗ್ರಾಮ ಪಂಚಾಯತಿ ಸದಸ್ಯರಾದ ಅಂಜನಾ ಪಾಟೀಲ, ಕಾವೇರಿ ಪಾಟೀಲ, ಮರಾಠಾ ಸಮಾಜದ ಮುಖಂಡ ಸಂತೋಷ ಪೆÇಲೀಸ್ ಪಾಟೀಲ, ಮಾಣಿಕರಾವ್ ಪಾಟೀಲ, ಶಶಿಕಾಂತ ಪಾಟೀಲ, ಸುಭಾಷ ಪಾಟೀಲ, ರೇವಣು ಪಾಟೀಲ, ನಿರ್ಮಲಾ ಸ್ವಾಮಿ, ಇಂದುಮತಿ ಬಿರಾದರ, ಶಾರದಾಬಾಯಿ ಕುಂಟೆ ಪಾಟೀಲ ಇದ್ದರು.
ಪ್ರೇಮ ಪ್ರಭಾ ನಿರೂಪಿಸಿ, ವಂದಿಸಿದರು.