ಸಮ ಸಮಾಜಕ್ಕೆ ಮಹಿಳೆಯರಿಗೂ ಅವಕಾಶ ನೀಡಿ

ಕಲಬುರಗಿ:ಮಾ.31: ಮಹಿಳೆಯರಿಗೆ ಸಮಾನ ಅವಕಾಶ ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಲಿಂಗ ತಾರತಮ್ಯ ನಿರ್ಮೂಲನೆ ಆಗಬೇಕು ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರೆಮ್ಮ ಢವಳಗಿ ಹೇಳಿದರು.

ತಾಲೂಕಿನ ಫಿರೋಜಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆ ಅಬಲೆಯಲ್ಲ, ಸಬಲೆ, ಎಲ್ಲ ಕ್ಷೇತ್ರಗಳಲ್ಲೂ ಸಿಕ್ಕ ಸದಾವಕಾಶ ಪಡೆದುಕೊಂಡು ತಮ್ಮ ಛಾಪು ಮೂಡಿಸುತ್ತಿದ್ದಾಳೆ. ಆದರೆ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ, ಶೋಷಣೆ ನಿಲ್ಲಬೇಕಿದೆ. ಇದಕ್ಕಾಗಿ ಮಹಿಳೆಯರ ಹಕ್ಕುಗಳ ಸಂರಕ್ಷಣೆ ಅಗತ್ಯವಾಗಿದೆ ಎಂದರು.

ಸಮನ್ವಯಾಧಿಕಾರಿ ಪ್ರಕಾಶ ರಾಠೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶರಣಪ್ಪ ಸಾಳೆ ಮಾತನಾಡಿದರು. ಮುಖ್ಯಗುರು ನಾಗಣ್ಣ ಬಿ. ದುಳಬಾ ಅಧ್ಯಕ್ಷತೆ ವಹಿಸಿ ಮಾತನಾಡಿದ್ದರು. ವೇದಿಕೆ ಮೇಲೆ ಸ್ಥಳೀಯ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ಅಲ್ಲಾವುದ್ದಿನ್, ಸಿಆರ್‍ಸಿ ಸಂಗೀತಾ ಕಲ್ಲಶೆಟ್ಟಿ, ಎಸ್‍ಡಿಎಂಸಿ ಅಧ್ಯಕ್ಷ ಬಾಬು ಪವಾಡಿ ಇದ್ದರು. ಇದೇ ವೇಳೆಗೆ ಈ ಶಾಲೆಯಲ್ಲೆ ಕಲಿತು ನೌಕರಿಗಿಟ್ಟಿಸಿಕೊಂಡ ನಾಲ್ವರು ವಿದ್ಯಾರ್ಥಿಗಳು, ಎಸ್‍ಡಿಎಂಸಿ ನೂತನ ಪದಾಧಿಕಾರಿಗಳು ಮತ್ತು ಗ್ರಾಪಂ ಸದಸ್ಯರನ್ನು ಸತ್ಕರಿಸಲಾಯಿತು. ಶಿಕ್ಷಕಿ ಬಂಡೆಮ್ಮ ಅರುಣಕುಮಾರ ಚೆಟ್ಟಿ ಎರಡು ಫ್ಯಾನ್‍ಗಳನ್ನು ದೇಣಿಗೆ ನೀಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಈಶ್ವರಗೌಡ, ಶಿಕ್ಷಕರಾದ ನಾಗಪ್ಪ, ಸೋಪಿಯಾ ಬೇಗಂ, ಶಕುಂತಲಾ, ಅಂಗನವಾಡಿ ಕಾರ್ಯಕರ್ತೆ ಗುರುಬಾಯಿ ಮಾಮಾನಿ, ಶಾಂತು ಕಂಬಾರ, ಶ್ರೀಮಂತ ಪೂಜಾರಿ, ಸಿದ್ದಣ್ಣ ಶಿರೂರ, ಶಿವಶಂಕರ ದೂಳಬಾ ಸೇರಿದಂತೆ ಶಿಕ್ಷಕ-ಶಿಕ್ಷೇತರ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪಾಲಕರು ಭಾಗವಹಿಸಿದ್ದರು. ಶಿಕ್ಷಕಿ ದೀಪಾ ನಿರೂಪಿಸಿದರು. ನಂತರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.