
ಮಾಜಿ ಸಚಿವರ ಬಾಂಬ್
ಬೆಂಗಳೂರು,ಮೇ೧೭:ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾವುಗಳು ಕಾಂಗ್ರೆಸ್ ಪಕ್ಷ ಬಿಡಲು ಸಿದ್ದರಾಮಯ್ಯನವರೇ ಪ್ರೇರಣೆ ಎಂದು ಮಾಜಿ ಸಚಿವರುಗಳಾದ ಎಸ್.ಟಿ. ಸೋಮಶೇಖರ್ ಮತ್ತು ಡಾ. ಕೆ. ಸುಧಾಕರ್ ಹೇಳುವ ಮೂಲಕ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಬಾಂಬ್ ಸಿಡಿಸಿದ್ದಾರೆ.ಮಾಜಿ ಸಚಿವ ಡಾ. ಕೆ. ಸುಧಾಕರ್ ಸಿದ್ದರಾಮಯ್ಯರವರ ವಿರುದ್ಧ ಟ್ವಿಟರ್‌ನಲ್ಲಿ ನೇರ ಆರೋಪ ಮಾಡಿ ೨೦೧೯ರ ಲೋಕಸಭಾ ಚುನಾವಣೆಯ ನಂತರ ಒಂದು ದಿನವೂ ಸಮ್ಮಿಶ್ರ ಸರ್ಕಾರವನ್ನು ಇರಲು ಬಿಡುವುದಿಲ್ಲ ಎಂದು ಶಾಸಕರುಗಳಿಗೆ ಸಿದ್ದರಾಮಯ್ಯ ಹೇಳಿದ್ದರು ಎಂಬುದನ್ನು ಈಗ ಬಹಿರಂಗಪಡಿಸಿದ್ದಾರೆ.ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯರವರು ಹೈಕಮಾಂಡ್ ಮಟ್ಟದಲ್ಲಿ ಪ್ರಯತ್ನ ನಡೆಸಿರುವಾಗಲೇ ಈ ಇಬ್ಬರ ಟ್ವೀಟ್ ರಾಜಕೀಯ ವಲಯದಲ್ಲಿ ಸದ್ದು ಮಾಡಿದ್ದು, ಸರ್ಕಾರ ಪತನಗೊಳಿಸಿದ ಸಿದ್ದರಾಮಯ್ಯರವರನ್ನು ಮತ್ತೆ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಇವರಿಬ್ಬರುರಾಜಕೀಯ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ.ಈ ಇಬ್ಬರ ಆರೋಪ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರಿಗೆ ಮುಜುಗರ ತಂದಿದೆ. ಡಿಕೆಶಿ ಬೆಂಬಲಿಗರಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
ಏನಿದು ಟ್ವೀಟ್?
ಸಮ್ಮಿಶ್ರ ಸರ್ಕಾರ ಕಾಲದಲ್ಲಿ ಕಾಂಗ್ರೆಸ್ ತೊರೆಯಲು ಸಿದ್ದರಾಮಯ್ಯನವರು ಪ್ರೇರಣೆ ಎಂಬ ಅರ್ಥ ಬರುವ ರೀತಿಯಲ್ಲಿ ಇವರಿಬ್ಬರು ಇಂದು ಪ್ರತ್ಯೇಕ ಟ್ವೀಟ್ ಮಾಡಿ,ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯನವರೇ ಪರೋಕ್ಷ ಕಾರಣ ಎಂಬ ಅರ್ಥಬರುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯರವರು ಸಮ್ಮಿಶ್ರ ಸರ್ಕಾರ ಕಾಲದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಅವರು ಶಾಸಕರಲ್ಲಿ ತೋಡಿಕೊಳ್ಳುತ್ತಿದ್ದ ಅಸಹಾಯಕತೆ ನಾವು ಪಕ್ಷ ಬಿಡಲು ಪ್ರೇರಣೆಯಾಯಿತು ಎಂದರೆ ತಪ್ಪಾಗಲಾರದು ಎಂದು ಮಾಜಿ ಸಚಿವ, ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಟ್ವಿಟರ್‌ನಲ್ಲಿ ಹೇಳಿದ್ದಾರೆ.ಸಮ್ಮಿಶ್ರ ಸರ್ಕಾರದಲ್ಲಿ ಕಾಲದಲ್ಲಿ ಪಕ್ಷ ಬಿಡಲು ಸಿದ್ದರಾಮಯ್ಯರವರೇ ಪರೋಕ್ಷ ಪ್ರೇರಣೆ ಎಂಬ ಸತ್ಯವನ್ನು ಯಾರು ನಿರಾಕರಿಸಲು ಸಾಧ್ಯವಿಲ್ಲ ಎಂದು ಎಸ್,ಟಿ ಸೋಮಶೇಖರ್ ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಪ್ರೇರಣೆ:ಡಾ.ಕೆ. ಸುಧಾಕರ್
ಈ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಮಾಜಿ ಸಚಿವ ಡಾ. ಕೆ. ಸುಧಾಕರ್ ಸಮ್ಮಿಶ್ರ ಸರ್ಕಾರ ಕಾಲದಲ್ಲಿ ಪಕ್ಷ ಬಿಡಲು ಸಿದ್ಧರಾಮಯ್ಯರವರ ಪ್ರೇರಣೆ ಪರೋಕ್ಷ ಅಥವಾ ಅಪರೋಕ್ಷಪಾತ್ರ ಇಲ್ಲವೆಂದು ಸಿದ್ದರಾಮಯ್ಯರವರು ನಿರಾಕರಿಸಲು ಸಾಧ್ಯವೇ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
೨೦೧೮ರಲ್ಲಿ ಅಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಕಾಲದಲ್ಲಿ ನಮಗಾಗುತ್ತಿದ್ದ ಅನ್ಯಾಯದ ಬಗ್ಗೆ ಹೇಳಿಕೊಳ್ಳಲು ಶಾಸಕರುಗಳ ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯರವರ ಬಳಿ ನಾವು ಹೋದಾಗಲೆಲ್ಲ ಈ ಸರ್ಕಾರದಲ್ಲಿ ನನ್ನದೇ ಏನೂ ನಡೆಯುತ್ತಿಲ್ಲ. ನನ್ನ ಕ್ಷೇತ್ರದ ನನ್ನ ಜಿಲ್ಲೆಗಳ ಕೆಲಸಗಳೇ ಆಗುತ್ತಿಲ್ಲ ಎಂದು ಹೇಳಿ ೨೦೧೯ರ ಲೋಕಸಭಾ ಚುನಾವಣೆಯವರೆಗೂ ಸಹಿಸಿಕೊಳ್ಳಿ. ಲೋಕಸಭಾ ಚುನಾವಣೆ ಮುಗಿದ ನಂತರ ಯಾವುದೇ ಕಾರಣಕ್ಕೂ ಒಂದು ದಿವಸವೂ ಕುಮಾರಸ್ವಾಮಿ ನೇತೃತ್ವದ ಈ ಸಮ್ಮಿಶ್ರ ಸರ್ಕಾರ ಇರಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಶಾಸಕರುಗಳಿಗೆ ಸಮಾಧಾನ ಮಾಡುತ್ತಿದ್ದರು ಎಂದು ಡಾ. ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.ನಮ್ಮ ಕ್ಷೇತ್ರಗಳಲ್ಲಿ ನಮ್ಮನ್ನು ನಂಬಿದ ಕಾರ್ಯಕರ್ತರನ್ನು, ಮುಖಂಡರನ್ನು ಉಳಿಸಿಕೊಳ್ಳಲು ದೊಡ್ಡ ರಿಸ್ಕ್ ತೆಗೆದುಕೊಂಡು ರಾಜೀನಾಮೆ ಕೊಟ್ಟು ಮತ್ತೊಮ್ಮೆ ಜನರಿಂದ ಆರಿಸಿ ಬಂದು ಮಂತ್ರಿಗಳಾದೆವು. ನಮ್ಮ ನಡೆಯಲ್ಲಿ ಸಿದ್ದರಾಮಯ್ಯರವರ ಪ್ರೇರಣೆ ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇಲ್ಲವೆಂದು ಸಿದ್ದರಾಮಯ್ಯರವರು ನಿರಾಕರಿಸಲು ಸಾಧ್ಯವೇ ಎಂದು ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.