ಸಮೃದ್ಧ ಸಮಾಜಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ

ಕಲಬುರಗಿ:ಮಾ.31: ಹಿರಿಯರು ಅನುಭವದ ಖಣಜ. ಅವರು ಸಮಾಜಕ್ಕೆ ಭಾರವಲ್ಲ. ಅವರು ತಮ್ಮಲ್ಲಿರುವ ಹಿರಿತನದ ಜ್ಞಾನ, ಅನುಭವವನ್ನು ಸಮಾಜಕ್ಕೆ ನೀಡಬೇಕು. ಕಿರಿಯರು ಅವರ ಅನುಭವದ ಮಾತುಗಳನ್ನು ಆಲಿಸಿ ಮುನ್ನಡೆಯಬೇಕು. ಇಳಿವಯಸ್ಸಿನಲ್ಲಿ ಅವರಿಗೆ ಗೌರವ ನೀಡಿ, ಉತ್ತಮ ಆರೈಕೆ, ಆಶ್ರಯ ನೀಡುವ ಭಾರತೀಯ ಶ್ರೇಷ್ಟ ಸಂಸ್ಕøತಿ ಉಳಿಸಿಕೊಂಡು ಹೋಗಬೇಕು. ಸಮೃದ್ಧ ಸಮಾಜ ನಿರ್ಮಾಣಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ ಎಂದು ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಶಿವಯೋಗಪ್ಪ ಬಿರಾದಾರ ಹೇಳಿದರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ ‘ಕೊಹಿನೂರ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ‘ಹಿರಿಯ ಸಮಾಜ ಸೇವಕರ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಗೌರವ ಸತ್ಕಾರವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ ಮಾತನಾಡಿ, ಪಾಶ್ಯಾತ್ಯ ಸಂಸ್ಕøತಿಯ ಪ್ರಭಾವದಿಂದಾಗಿ ಹಿರಿಯರಿಗೆ ಗೌರವ ನೀಡುವ ಪದ್ಧತಿ ಕಡಿಮೆಯಾಗುತ್ತಿರುವದು ವಿಷಾದನೀಯ ಸಂಗತಿ. ವೃದ್ಧಾಶ್ರಮಗಳು ಇದರ ಸಂಕೇತಗಳಾಗಿವೆ. ಎಂತಹ ಸಂದರ್ಭದಲ್ಲಿಯೂ ವಯೋವೃದ್ಧರನ್ನು ವೃದ್ಧಾಶ್ರಮಕ್ಕೆ ನೂಕುವ ನೀಚ ಬುದ್ಧಿ ಬೇಡ. ಸದೃಢ ರಾಷ್ಟ್ರ ನಿರ್ಮಾಣಕ್ಕೆ ಹಿರಿಯರ ಸೂಕ್ತ ಸಲಹೆ, ಮಾರ್ಗದರ್ಶನ ತುಂಬಾ ಅವಶ್ಯಕವಾಗಿದೆ. ಹಿರಿಯರು ಸಮಾಜ ಸೇವೆಯಲ್ಲಿ ತೊಡಗಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಕೊಹಿನೂರ ಸಂಸ್ಥೆಯ ಅಧ್ಯಕ್ಷ ಡಾ.ಸತೀಶ್ ಟಿ.ಸಣಮನಿ, ದೇವೇಂದ್ರಪ್ಪ ಗಣಮುಖಿ, ದತ್ತು ಹಡಪದ, ಸಾಯಿ ಎಸ್.ಸಣಮನಿ ಸೇರಿದಂತೆ ಮತ್ತಿತರರಿದ್ದರು.