ಸಮೃದ್ಧ ಕರ್ನಾಟಕ ನಿರ್ಮಾಣ: ಸಿಎಂ ಸಂಕಲ್ಪ

ತುಮಕೂರು, ಮಾ. 5- ಕರುನಾಡಿನಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಮೃದ್ಧ ಕರ್ನಾಟಕ ನಿರ್ಮಾಣದ ಸಂಕಲ್ಪ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದರು.
ಮುಂಬರುವ ಚುನಾವಣೆಯಲ್ಲಿ ನಮಗೆ ಸಕಾರಾತ್ಮಕವಾಗಿ ಆಶೀರ್ವಾದ ಮಾಡಿದರೆ ಕರ್ನಾಟಕವನ್ನು ಭಾರತದಲ್ಲೇ ನಂ. 1 ಮಾಡುತ್ತೇವೆ ಎಂದು ಅವರು ಹೇಳಿದರು.
ನಗರದ ಸರ್ಕಾರಿ ಪ.ಪೂ. ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ., ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‌ಸಿಟಿ ಯೋಜನೆಯ 600 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಅಭಿವೃದ್ಧಿ ಯೋಜನೆಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಮಗೆ ಮುಂದಿನ ಚುನಾವಣೆಯಲ್ಲಿ ಸಕಾರಾತ್ಮಕ ಆಶೀರ್ವಾದ ಮಾ‌‌ಡಿ, ನಕಾರಾತ್ಮಕ ಆಶೀರ್ವಾದ ಬೇಡ ಎಂದು ಮನವಿ ಮಾಡಿದರು.
ನಮ್ಮ ನಾಡನ್ನು ಸಮೃದ್ಧವಾಗಿಸಲು ಜನತೆ ಸಶಕ್ತವಾಗಬೇಕು. ಈ ನಿಟ್ಟಿನಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ರೂಪಿಸಿದೆ. ಮುಂದೆಯೂ ರೂಪಿಸಲಿದೆ. ಇದಕ್ಕೆ ರಾಜ್ಯ ಮತ್ತು ದೇಶದ ಜನರ ಆಶೀರ್ವಾದ ಅಗತ್ಯವಾಗಿದೆ ಎಂದರು.
ನಮ್ಮ ಸರ್ಕಾರ ಫಲಾನುಭವಿಗಳಿಗೆ ಸವಲತ್ತು ತಲುಪಿಸುವಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಮಾಡಿಲ್ಲ. ಆದರೆ ಬೇರೆ ಸರ್ಕಾರಗಳು ಫಲಾನುಭವಿಗಳಿಗೆ ಸವಲತ್ತು ಒದಗಿಸುವಲ್ಲಿ ವಿಳಂಬ ಮಾಡುತ್ತವೆ. ಆದರೆ ಸಭೆ-ಸಮಾರಂಭಗಳಿಗೆ ಮಾತ್ರ ವಿಳಂಬ ಇಲ್ಲದೆ ಭಾಗಿಯಾಗುತ್ತಾರೆ ಎಂದು ಹೇಳುವ ಮೂಲಕ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ ಎಂದು ನೆರೆದಿದ್ದ ಜನರಲ್ಲಿ ಕೋರಿದರು.
ಕಳೆದ 65 ವರ್ಷಗಳಲ್ಲಿ ಕೇವಲ ಭಾಷಣದಿಂದಲೇ ಜನರನ್ನು ಮರುಳು ಮಾಡುವ ರಾಜಕಾರಣಿಗಳನ್ನು ನೋಡಿದ್ದೇವೆ. ಹಲವಾರು ಯೋಜನೆಗಳು ಘೋಷಣೆಯಾಗುತ್ತಿದ್ದವು. ಆದರೆ ಅನುಷ್ಠಾನವಾಗುತ್ತಿರಲಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದೀಗ ಬದಲಾವಣೆಯ ಗಾಳಿ ಬೀಸುತ್ತಿದೆ. ದೇಶ ಮತ್ತು ರಾಜ್ಯದ ಜನರು ಪರಿವರ್ತನೆ ಬಯಸಿದ್ದರಿಂದ ಡಬಲ್ ಎಂಜಿನ್ ಸರ್ಕಾರಗಳು ಅಧಿಕಾರ ನಡೆಸುತ್ತಿದ್ದು, ದೇಶ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿ ಮಂತ್ರ ಜಪಿಸಲಾಗುತ್ತಿದೆ ಎಂದರು.
ಕಳೆದ 4 ವರ್ಷದಲ್ಲಿ ತುಮಕೂರಿನ 24 ಲಕ್ಷ ಜನರಿಗೆ ಒಂದಿಲ್ಲೊಂದು ಕಾರ್ಯಕ್ರಮ ಲಾಭ, ನೇರವಾಗಿ ಜನರ ಖಾತೆಗೆ ತಲುಪಿದೆ. ಪ್ರಧಾನಿ ನರೇಂದ್ರ ಮೋದಿಯವರ ಗರೀಬ್ ಕಲ್ಯಾಣ್, ಆತ್ಮ ನಿರ್ಭರ್ ಭಾರತ್‌, ಕಿಸಾನ್ ಸಮ್ಮಾನ್ ಯೋಜನೆಯಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ. ಕರ್ನಾಟಕಕ್ಕೆ ಪ್ರಧಾನಿಗಳು 17 ಲಕ್ಷ ಮನೆಗಳು ನೀಡಿದ್ದಾರೆ. ಜಲಜೀವನ್ ಮಿಷನ್ ಯೋಡನೆಯಡಿ ಮನೆ ಬಾಗಿಲಿಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ಅವಾಜ್ ಯೋಜನೆ, ಜೆಜೆಎಂ, ಬೆಳಕು ಯೋಜನೆ, ಉಜ್ವಲ ಯೋಜನೆ, ಬದುಕು ಕಟ್ಟುವ ಯೋಜನೆ ಸೇರಿದಂತೆ ಹಲವಾರು ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜನತೆಗೆ ಒದಗಿಸಲಾಗಿದೆ ಎಂದರು.
ಈ ಹಿಂದೆ ದುಡ್ಡೇ ದೊಡ್ಡಪ್ಪ ಎಂದು ಹೇಳುತ್ತಿದ್ದರೆ. ಆದರೆ 21ನೇ ಶತಮಾನದಲ್ಲಿ ಅದರಲ್ಲೂ ನರೇಂದ್ರ ಮೋದಿಯವರ ಆಡಳಿತದಿಂದ ದೇಶದಲ್ಲಿ ಬದಲಾವಣೆಯಾಗಿದ್ದು, ಈಗ ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಆಗಿದೆ. ಆದ್ದರಿಂದ ಯುವಕರಿಗೆ ತರಬೇತಿ ನೀಡುವ ಮೂಲಕ ಉದ್ಯೋಗಗಳ ಅವಕಾಶ ಕಲ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ 72 ವರ್ಷದಲ್ಲಿ ಕೇವಲ 25 ಲಕ್ಷ ಮನೆಗಳಿಗೆ ಮಾತ್ರ ಕುಡಿಯುವ ನೀರನ್ನು ಅಧಿಕಾರ ನಡೆಸಿದಂತಹ ಸರ್ಕಾರ ಒದಗಿಸಿತ್ತು. ಆದರೆ ಕಳೆದ ಮೂರು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 40 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಕೆಲಸ ಮಾಡುವ ಮೂಲಕ ಬಡವರ ಬದುಕನ್ನು ಹಸನುಗೊಳಿಸುತ್ತಿದೆ ಎಂದು ಅವರು ಹೇಳಿದರು.