ಸಮುದ್ರ ಸೇರಿದ ಕಲಡಾಮೆ ಮರಿಗಳು

ಕುಂದಾಪುರ, ಎ.೮- ಕೋಡಿ ಲೈಟ್‌ಹೌಸ್ ಬೀಚ್‌ನ ಕಡಲ ತೀರದಲ್ಲಿ ನೆಟ್‌ಗಳ ಮೂಲಕ ರಕ್ಷಿಸಲಾಗಿದ್ದ ೭ನೇ ಹ್ಯಾಚರಿಯಲ್ಲಿದ್ದ ಕಡಲಾಮೆಯ ಮೊಟ್ಟೆಗಳಲ್ಲಿ ೭೨ ಮರಿಗಳು ಮಂಗಳವಾರ ರಾತ್ರಿ ಹೊರಬಂದಿದ್ದು, ಅವುಗಳನ್ನು ಸುರಕ್ಷಿತವಾಗಿ ಸಮುದ್ರದ ಮಡಿಲಿಗೆ ಸೇರಿಸಲಾಗಿದೆ.

ಈ ವರ್ಷದ ಜ.೨೨ರಿಂದ ಮಾ.೩ರವರೆಗೆ ಕೋಡಿ ಲೈಟ್‌ಹೌಸ್ ಬೀಚ್‌ನಲ್ಲಿ ೧೦ ಹಾಗೂ ಗೋಪಾಡಿ ಬೀಚ್‌ನಲ್ಲಿ ಒಂದು ಕಡೆ ಸೇರಿದಂತೆ ಒಟ್ಟು ೧೧ ಕಡೆಗಳಲ್ಲಿ ಅಪರೂಪದ ಆಲಿವ್ ರಿಡ್ಲೇ ಪ್ರಬೇಧಕ್ಕೆ ಸೇರಿದ ಕಡಲಾಮೆಗಳು ಬಂದು ಮೊಟ್ಟೆ ಇಟ್ಟು ತೆರಳಿವೆ. ಇವುಗಳ ಪೈಕಿ ಮೊದಲೆರಡು ಹ್ಯಾಚರಿಗಳಿಂದ ಮಾ.೧೮ರ ರಾತ್ರಿ ಒಟ್ಟು ೧೨೦ ಮರಿಗಳು ಮೊಟ್ಟೆಯೊಡೆದು ಹೊರಬಂದಿದ್ದು, ಅವುಗಳನ್ನು ಸುರಕ್ಷಿತವಾಗಿ ಅರಬಿಸಮುದ್ರಕ್ಕೆ ಸೇರಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಬೀಜಾಡಿಯ ಒಂದು ಹ್ಯಾಚರಿ ಸೇರಿದಂತೆ ಒಟ್ಟು ಏಳು ಗೂಡುಗಳಿಂದ ಒಟ್ಟು ಸುಮಾರು ೩೭೦ ಮರಿಗಳು ಮೊಟ್ಟೆ ಯಿಂದ ಹೊರಬಂದು ಸುರಕ್ಷಿತವಾಗಿ ಸಮುದ್ರ ಸೇರಿವೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ತಿಳಿಸಿದ್ದಾರೆ. ಕೋಡಿ ಬೀಚ್‌ನಲ್ಲಿ ಇನ್ನು ನಾಲ್ಕು ಹ್ಯಾಚರಿಗಳಲ್ಲಿ ಅಂದಾಜು ೪೦೦ ಮೊಟ್ಟೆಗಳಿದ್ದು, ಅವುಗಳಿಂದ ಮೇ ಮೊದಲ ವಾರದವರೆಗೂ ಮೊಟ್ಟೆ ಯೊಡೆದು ಮರಿಗಳು ಹೊರಬರುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ರಾತ್ರಿ ವೇಳೆ ಸುರಕ್ಷಿತ ಸಮುದ್ರ ತೀರಕ್ಕೆ ಬಂದು ಮರಳಿನಲ್ಲಿ ತಾಯಿ ಆಮೆ ಇಡುವ ಮೊಟ್ಟೆ ಸಾಮಾನ್ಯವಾಗಿ ೫೦ರಿಂದ ೫೫ ದಿನಗಳಲ್ಲಿ ಒಡೆದು ಮರಿಗಳು ಹೊರಬರುತ್ತವೆ ಎಂದು ಪ್ರಭಾಕರ ಕುಲಾಲ್ ತಿಳಿಸಿದರು. ಈ ಬಾರಿ ತಾಯಿ ಆಮೆಗಳು ೧೧ ಕಡೆಗಳಲ್ಲಿ ಒಟ್ಟು ಸುಮಾರು ಒಂದು ಸಾವಿರ ಮೊಟ್ಟೆಗಳನ್ನು ಇಟ್ಟಿದ್ದು, ಅವುಗಳಲ್ಲಿ ಇದುವರೆಗೆ ೩೭೦ ಮರಿಗಳು ಹೊರಬಂದಿವೆ. ೬೦ ದಿನಗಳವರೆಗೆ ನಾವು ಈ ಮೊಟ್ಟೆಗಳನ್ನು ಮುಟ್ಟುವುದಿಲ್ಲ. ಆ ಬಳಿಕ ಅವುಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುತ್ತೇವೆ. ಮೊಟ್ಟೆಯಿಂದ ಹೊರಬಂದ ಕಡಲಾಮೆ ಮರಿಗಳಿಗೆ ಬೆಳಕಿನ ಮೂಲಕ ಅವುಗಳಾಗಿಯೇ ಕಡಲು ಸೇರಲು ಬೇಕಾದ ಮಾರ್ಗದರ್ಶನ ಮಾಡು ತ್ತೇವೆ ಎಂದವರು ಹೇಳಿದರು. ಮಂಗಳವಾರ ಮಧ್ಯರಾತ್ರಿ ೧೨ ಗಂಟೆಯಿಂದ ಬೆಳಗಿನ ಜಾವ ೨ ರವರೆಗೆ ಈ ಕಾರ್ಯಾಚರಣೆ ನಡೆಯಿತು. ರಾಜ್ಯ ಅರಣ್ಯ ಇಲಾಖೆಯ ಅರಣ್ಯ ಪಡೆ (ಪಿಸಿಸಿಎಫ್) ಮುಖ್ಯಸ್ಥ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಕುಂದಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಅಶೀಶ್ ರೆಡ್ಡಿ, ಅರಣ್ಯ ಇಲಾಖೆ ಸಿಬ್ಬಂದಿಗಳು, ಎಫ್‌ಎಸ್‌ಎಲ್ ಇಂಡಿಯಾ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ರೀಫ್ ವಾಚ್ ಸಂಸ್ಥೆಯ ಸದಸ್ಯರು, ಸ್ಥಳೀಯ ಕೋಡಿ ಗ್ರಾಮಸ್ಥರು ತಡರಾತ್ರಿಯ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಭಾಕರ ಕುಲಾಲ್ ತಿಳಿಸಿದರು.