ಸಮುದ್ರದ ಅಬ್ಬರ: ಟಗ್ ನೀರುಪಾಲು

ಓರ್ವ ಮೃತ್ಯು, ಇಬ್ಬರು ಪಾರು: ಐವರು ನಾಪತ್ತೆ
ಪಡುಬಿದ್ರಿ, ಮೇ ೧೬- ಎನ್‌ಎಂಪಿಟಿಯಿಂದ ೧೬ ನಾಟಿಕಲ್ ಮೈಲ್ ದೂರದಲ್ಲಿನ ಕರ್ತವ್ಯಕ್ಕಾಗಿ ತೆರಳಿದ್ದ ೮ ಮಂದಿ ಗುತ್ತಿಗೆ ಕಾರ್ಮಿಕರಿದ್ದ ಹ್ಯಾಟ್ ಎಲ್‌ಐ ಎಂಬ ಹೆಸರಿನ ಟಗ್ ಬಿರುಸಾಗಿದ್ದ ಸಮುದ್ರದಲೆಗಳ ನಡುವೆ ಬುಡಮೇಲಾಗಿ ಬಿದ್ದಿದ್ದು ಪಡುಬಿದ್ರಿಯಲ್ಲಿ ದಡ ಸೇರಿದೆ. ಘಟನೆಯಲ್ಲಿ ಓರ್ವನ ಮೃತದೇಹ ಪತ್ತೆಯಾಗಿದ್ದು, ಇಬ್ಬರು ಪಾರಾಗಿದ್ದರೆ ಐವರು ನಾಪತ್ತೆಯಾಗಿದ್ದಾರೆ. ಸದ್ಯ ನಾಪತ್ತೆಯಾದವರ ರಕ್ಷಣಾ ಕಾರ್ಯ ಮುಂದುವರೆದಿದೆ.
ಇದರಲ್ಲಿ ಇಬ್ಬರು ಕಾರ್ಮಿಕರು ಕಟಪಾಡಿ ಮಟ್ಟುಕೊಪ್ಲ ಬಳಿ ದಡ ಸೇರಿದ್ದಾರೆ. ಓರ್ವನ ಮೃತದೇಹ ತೆಂಕ ಎರ್ಮಾಳು ಸಮುದ್ರ ತೀರದಲ್ಲಿ ಪತ್ತೆಯಾಗಿದ್ದು ಮೂಲ್ಕಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಐವರು ನಾಪತ್ತೆಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಚೀಫ್ ಆಫೀಸರ್ ಅಷ್ಪಕ್ ಅಲಿ ಖಲ್ಪೆ ಮತ್ತವರ ಅಲಯನ್ಸ್ ತಂಡದಲ್ಲಿದ್ದ ಉತ್ತರ ಭಾರತ ಮೂಲದ ಕಾರ್ಮಿಕರಾದ ಝಿಬಾನುಲ್, ಮೊನಿರುಲ್ ಮೊಲ್ಲ, ಕರೀಬುಲ್ ಸಿಯಾಜುಲ್ ಶೇಖ್, ಮೈನುದ್ದೀನ್ ಹೇಕ್ ಶೇಖ್, ಪವನ್ ಚಂದ್ ಕಟೋಚ್, ನಾಜಿಮ್ ಅಹ್ಮದ್, ಹೇಮನಾಥ ಝಾ ಟಗ್‌ನಲ್ಲಿದ್ದರು. ಅವರು ಸೂಪರ್ ಶಿಪ್‌ಗಳ ಮೂಲಕ ಬಂದರಿಗೆ ಬರುತ್ತಿರುವ ಎಂಆರ್‌ಪಿಎಲ್‌ಗೆ ಸಂಬಂಧಿಸಿದ ಆಯಿಲ್‌ನ ಪಂಪಿಂಗ್ ಕಾರ್ಯಕ್ಕೆ ಪ್ರತಿನಿತ್ಯ ತೆರಳುತ್ತಿದ್ದು ವಾಪಸಾಗುವಾಗ ಅವಘಡವು ಸಂಭವಿಸಿದೆ. ಹೇಮನಾಥ ಅವರ ಶವ ಪತ್ತೆಯಾಗಿದೆ. ಕಟಪಾಡಿ ಮಟ್ಟು ಬಳಿ ಜೀವಂತವಾಗಿ ದಡ ಸೇರಿರುವ ಮೊನಿರುಲ್ ಮೊಲ್ಲ (೩೪) ಹಾಗೂ ಕರೀಬುಲ್ ಸಿಯಾಜುಲ್ ಶೇಖ್(೨೪) ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.