ಸಮುದ್ರತೀರದ ಅಭಿವೃದ್ಧಿ ಯೋಜನೆ ಪರಿಷ್ಕರಿಸಲು ಜೀವವೈವಿಧ್ಯ ಮಂಡಳಿ ಸೂಚನೆ

ಕಾರವಾರ,ಮೇ27: ಇತ್ತೀಚೆಗೆ ಅಪ್ಪಳಿಸಿದ ತೌಕ್ತೆ ಚಂಡಮಾರುತದಿಂದಾಗಿ ರಾಜ್ಯದ ಕರಾವಳಿಯ ಮೂರೂ ಜಿಲ್ಲೆಗಳ ಸಮುದ್ರತೀರವು ಅಪಾರ ಹಾನಿಗೆ ಒಳಗಾಗಿದೆ. ಸಂಕಷ್ಟಕ್ಕೀಡಾದ ಮೀನುಗಾರರು ಹಾಗೂ ಸಮುದ್ರತೀರದ ರೈತರ ಕುಟುಬಗಳಿಗೆ ಶೀಘ್ರ ಸೂಕ್ತ ಪರಿಹಾರ ದೊರಯುವಂತಾಗಬೇಕು. ಜೊತೆಗೆ, ಚಂಡಮಾರುತಗಳಿಂದಾಗಿ ಭವಿಷ್ಯದಲ್ಲಿ ಪುನಃ ಕರಾವಳಿಯ ಪರಿಸರ ನಾಶವಾಗದಂತೆ ದೀರ್ಘಗಾಮೀ ಕ್ರಮ ಕೈಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸಮುದ್ರತೀರದ ಅಭಿವೃದ್ಧಿ ಯೋಜನೆಗಳ ವಿಧಾನಗಳನ್ನು ಪರಿಷ್ಕರಿಸಬೇಕಿದ್ದು, ಈ ಕುರಿತಂತೆ ಉನ್ನತಮಟ್ಟದ ಸಮಾಲೋಚನಾ ಸಭೆ ನಡೆಸಿ ಸೂಕ್ತ ಕಾರ್ಯನೀತಿ ರೂಪಿಸಬೇಕೆಂದು, ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ರಾಜ್ಯ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಇತ್ತೀಚಿನ ಚಂಡಮಾರುತದಿಂದಾಗಿ ಕರಾವಳಿಯಲ್ಲಿ ಆಗಿರುವ ಭಾರಿ ಅನಾಹುತಗಳ ವಿವರವಾದ ಮಾಹಿತಿ ಪಡೆದು, ಈ ಸಮಸ್ಯೆ ಗಂಭಿರ ಸ್ವರೂಪ ಪಡೆಯುತ್ತಿರುವದನ್ನು ಗಮನಿಸಿ, ಅವರು ಈ ಕ್ರಮಕ್ಕೆ ಸೂಚಿಸಿದ್ದಾರೆ. ಹಿಂದಿನಿಂದಲೂ ಬಿರುಗಾಳಿ, ಸುನಾಮಿ, ಚಂಡಮಾರುತಗಳು ಬಂದಾಗಲೆಲ್ಲ, ಹಲವೆಡೆ ಭಾರಿ ಸಮುದ್ರಕೊರೆತವಾಗುತ್ತಲೇ ಇದೆ. ಅದನ್ನು ತಡೆಗಟ್ಟಲು ರಾಜ್ಯ ಬಂದರು ಇಲಾಖೆಯು ಸಮುದ್ರತೀರಕ್ಕೆ ಕಲ್ಲಿನ ತಡೆಗೋಡೆ ನಿರ್ಮಿಸುವ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ, ದಕ್ಷಿಣ ಕನ್ನಡದ ಉಲ್ಲಾಳದಿಂದ ಕಾರವಾರದವರೆಗೆ, ಹಲವೆಡೆ ಈ ಕಲ್ಲಿನ ತಡೆಗೋಡೆಗಳು ಸಮುದ್ರಕ್ಕೆ ಆಹುತಿಯಾಗಿ, ಸಮುದ್ರತೀರದ ಕೊರೆತ ಮುಂದುವರಿದಿರುವದು ಖೇದದ ಸಂಗತಿ ಎಂದು ಅವರು ತಿಳಿಸಿದ್ದಾರೆ.
ಸಮುದ್ರದ ಅಲೆಗಳ `ಗರಿಷ್ಟ ಉಬ್ಬರದ ರೇಖೆ’ಯ (ಎಚ್.ಟಿ.ಎಲ್) ಒಳ ಪ್ರದೇಶದಲ್ಲೇ, ಸಿ.ಆರ್.ಝ್. ನಿಯಮಗಳನ್ನೂ ಮೀರಿ ವಿವಿಧ ಬಗೆಯ ಕಾಮಗಾರಿಗಳನ್ನು ನಡೆಸಿರುವದೇ ಇದಕ್ಕೆ ಪ್ರಮುಖ ಕಾರಣ ಎಂದು ಕಂಡುಬಂದಿದೆ. ಮೊನ್ನಿನ ತೌಕ್ತೆ ಚಂಡಮಾರುತವು ಹಲವೆಡೆ ಅಂತಹ ತಡೆಗೋಡೆ, ತಾತ್ಕಾಲಿಕ ಕಟ್ಟಡಗಳು, ಪ್ರವಾಸೋದ್ಯಮದ ಸೌಕರ್ಯಗಳು ಇತ್ಯಾದಿಗಳನ್ನು ಕೊಚ್ಚಿಕೊಂಡು ಹೋಗಿದೆ. ಇಂಥ ಅಡೆತಡೆಗಳು ಹೆಚ್ಚಾದಾಗ, ಹಲವೆಡೆ ಭಾರಿ ತೆರೆಗಳು ಎಚ್.ಟಿ.ಎಲ್. ರೇಖೆಯನ್ನೂ ದಾಟಿ ಇಪ್ಪತ್ತು-ಮೂವತ್ತು ಮೀಟರು ಒಳಪ್ರದೇಶಕ್ಕೆ ನುಗ್ಗಿರುವದೂ ದಾಖಲಾಗಿದೆ. ಹೀಗಾಗಿ, ಸರ್ಕಾರ ಹಾಗು ಖಾಸಗಿ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುವಾಗ, ಎಚ್.ಟಿ.ಎಲ್.ವರೆಗಿನ ಸಮುದ್ರತೀರದ ಮರಳುದಿನ್ನೆ ಪ್ರದೇಶಕ್ಕೆ ಧಕ್ಕೆಯಾಗಂತೆ ನೋಡಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಅವರು ತಿಳಿಸಿದ್ದಾರೆ.
ಸಮುದ್ರಕೊರೆತ ತಡೆಗಟ್ಟುವ ಹಾಗೂ ಸ್ಥಳೀಯ ನಿವಾಸಿಗಳ ಬದುಕನ್ನು ರಕ್ಷಿಸುವ ಸುಸ್ಥಿರ ಕಾರ್ಯನೀತಿಯೊಂದನ್ನು ಇದೀಗ ಅಳವಡಿಸಿಕೊಳ್ಳಬೇಕಿದೆ. ಈ ಕುರಿತು, ರಾಜ್ಯ ಪರಿಸರ ಸಚಿವರ ಗಮನವನ್ನೂ ಸೆಳೆಯಲಾಗಿದೆ. ರಾಜ್ಯ ಸಿ.ಆರ್.ಝ್. ಅಥಾರಿಟಿ, ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಕರಾವಳಿ ಪ್ರದೇಶದ ಜಿಲ್ಲಾಡಳಿತಗಳು ಈ ಕುರಿತಂತೆ ಸೂಕ್ತ ಕಾಲಬದ್ಧ ಯೋಜನೆಗಳನ್ನು ಹಮ್ಮಿಕೊಳ್ಳುವದರ ಅಗತ್ಯವನ್ನು ಅಶೀಸರ ಅವರು ಒತಿ ್ತಹೇಳಿದ್ದಾರೆ.