ಸಮುದಾಯ ಸಹಭಾಗಿತ್ವದೊಂದಿಗೆ ಗ್ರಾಮ ನೈರ್ಮಲ್ಯ ಯೋಜನೆ ಸಿದ್ಧಪಡಿಸಲು ಸಲಹೆ


ಚಿತ್ರದುರ್ಗ.ಸೆ.೧೭;  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಸಭೆ, ನೈರ್ಮಲ್ಯ ನಡಿಗೆ, ಸಾಮಾಜಿಕ ನಕ್ಷೆ ತಯಾರಿಸಿ ಸಮುದಾಯ ಸಹಭಾಗಿತ್ವದೊಂದಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಗ್ರಾಮ ನೈರ್ಮಲ್ಯ ಯೋಜನೆ ಕುರಿತು ಮಾಹಿತಿ ಸಂಗ್ರಹಿಸಬೇಕು ಎಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್, ಸ್ವಚ್ಚ ಭಾರತ್ ಮಿಷನ್ ಗ್ರಾಮೀಣ ಯೋಜನೆಯಡಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗ್ರಾಮ ನೈರ್ಮಲ್ಯ ಯೋಜನೆ ಕುರಿತು ತಾಲ್ಲೂಕು ಮಟ್ಟದ ಒಂದು ದಿನದ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಪ್ರತಿ ಗ್ರಾಮಗಳಲ್ಲಿ ಗ್ರಾಮ ನೈರ್ಮಲ್ಯ ಯೋಜನೆ ಕಾರ್ಯರೂಪಕ್ಕೆ ತರಬೇಕು. ಸಮುದಾಯ ಶೌಚಾಲಯ, ದೇವಸ್ಥಾನ, ಮಸೀದಿ, ಮಂದಿರಗಳಲ್ಲಿ ನೈರ್ಮಲ್ಯ ಕಾಪಾಡಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಹೊರ ವಲಯದ ತಿಪ್ಪೆಗಳನ್ನು ತೆರವುಗೊಳಿಸಿ ಕ್ರಿಮಿನಾಶಕ ಔಷಧಿ ಸಿಂಪಡಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಯಾವುದೇ ಮನೆಗಳಲ್ಲಿ ಶೌಚಾಲಗಳಿಂದ ವಂಚಿತರಾಗದAತೆ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡದಂತೆ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ತಿಳಿಸಿದರು.
ಪಂಚಾಯತ್ ರಾಜ್ ಸಹಾಯಕ ನಿರ್ದೇಶಕಿ ಚೈತ್ರ ಮಾತನಾಡಿ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೈರ್ಮಲ್ಯ ಯೋಜನೆ ತಯಾರಿಸಲು ಹಾಗೂ ಪಿಆರ್‌ಎ ಚಟುವಟಿಕೆಗಳನ್ನು ಎಲ್ಲಾ ಗ್ರಾಮಗಳಲ್ಲಿ ಹಮ್ಮಿಕೊಳ್ಳಲು ತಿಳಿಸಿದರು. ಎಲ್ಲಾ ಗ್ರಾಮಗಳನ್ನು ಓ.ಡಿ.ಎಫ್. ಪ್ಲಸ್ ಮಾಡುವ ಹಾಗೂ ಘನ ಮತ್ತು ದ್ರವ ತ್ಯಾಜ್ಯ ಸಮರ್ಪಕ ನಿರ್ವಹಣೆ, ನಿರಂತರ ಮಾಹಿತಿ ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮಗಳಿಗಾಗಿ ಈಗಾಗಲೇ ಅಭಿವೃದ್ಧಿ ಪಡಿಸಿರುವ ಮೂಲಭೂತ ಸೌಕರ್ಯಗಳ ಸುಸ್ಥಿರ ಕಾರ್ಯ ಚಟುವಟಿಕೆಗಳನ್ನು ಸಹ ಕಾಯ್ದುಕೊಳ್ಳುವುದು ಈ ಓ.ಡಿ.ಎಫ್ ಪ್ಲಸ್ ಸುಸ್ಥಿರತೆಯನ್ನು ಕಾಪಾಡುವಲ್ಲಿ ಪ್ರಧಾನ ಅಂಶವಾಗಿರುತ್ತದೆ ಎಂದು ತಿಳಿಸಿದರು.