ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರ ಅನುದಾನ ಬಿಡುಗಡೆ


ಬೆಂಗಳೂರು, ಮಾ. ೨೨- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿವಿಧ ಸಮಾಜ ಸೇವಾ ಸಂಘಗಳಿಗೆ ಸಮುದಾಯ ಭವನಗಳನ್ನು ನಿರ್ಮಿಸಲು ಅಗತ್ಯವಿರುವ ಅನುದಾನವನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡುವುದಾಗಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ವಿಧಾನಸಭೆಯಲ್ಲಿಂದು ತಿಳಿಸಿ ದರು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಶಿವಾನಂದ ಎಸ್. ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ೨ ಸಾವಿರ ವಿವಿಧ ಸಮಾಜ ಸೇವಾ ಸಂಘಗಳು ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಬೇಡಿಕೆ ಇದೆ. ಈ ಎಲ್ಲವನ್ನು ಈಡೇರಿಸಲು ೩೯೧ ಕೋಟಿ ರೂ. ಬೇಕಾಗುತ್ತದೆ. ಆದಷ್ಟು ಬೇಗ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.
ಬಸವನ ಬಾಗೇವಾಡಿಯ ನಿಜಶರಣ ಅಂಬಿಗರ ಸಮಾಜ ಸೇವಾ ಸಂಘ ಸೇರಿದಂತೆ ಕೆಲ ಸಮಾಜ ಸೇವಾ ಸಂಘಗಳ ಸಮುದಾಯ ಭವನ ನಿರ್ಮಾಣಕ್ಕೆ ಮೂಱ್ನಾಲ್ಕು ವರ್ಷಗಳ ಹಿಂದೆಯೇ ಅನುಮೋದನೆ ನೀಡಿದ್ದರೂ ಅನುದಾನ ಬಿಡುಗಡೆಯಾಗಿಲ್ಲ. ಇದು ಸರ್ಕಾರದ ಗಮನದಲ್ಲಿದ್ದು, ಈ ಸಂಬಂಧ ಕಡತಗಳನ್ನು ತರಿಸಿಕೊಂಡು ಆದಷ್ಟು ಶೀಘ್ರ ಈ ಕಡತಗಳಿಗೆ ಅನುಮೋದನೆ ನೀಡಿ ಅನುದಾನ ಬಿಡುಗಡೆ ಮಾಡಿಕೊಡುವ ಭರವಸೆಯನ್ನು ಅವರು ನೀಡಿದರು.