ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸಲು ಒತ್ತಾಯ

ಸಿರವಾರ.ಮಾ.ಂ೫- ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸುವಂತೆ ಭಾರತೀಯ ಮಾನವ ಹಕ್ಕಗಳ ಪರಿಷತ್ತು ರಾಜ್ಯ ಆರೋಗ್ಯ ಸಚಿವರಿಗೆ ಬರೆದ ಪತ್ರ ತಹಸೀಲ್ದಾರ ಮೂಲಕ ನೀಡಿ ಒತ್ತಾಯಿಸಿದ್ದಾರೆ.
ಸಿರವಾರ ನೂತನ ತಾಲೂಕು ಘೋಷಣೆಯಾಗಿ ಸುಮಾರು ೮ ವರ್ಷಗಳು ಗತಿಸಿದರೂ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತೀಕರಿಸಲು ಜನ ಪ್ರತಿನಿಧಿಗಳು ಹಾಗೂ ಜಿಲ್ಲಾ ಮತ್ತು ತಾಲೂಕಾಡಳಿತ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಿನನಿತ್ಯ ಸುಮಾರು ೨೦೦೦ ಕ್ಕಿಂತ ಹೆಚ್ಚಾಗಿ ಸುತ್ತ-ಮುತ್ತಲಿನ ೫೭ ಹಳ್ಳಿಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬರುತ್ತಾರೆ. ಅವರಿಗೆ ಸರಿಯಾದ ಚಿಕಿತ್ಸೆ ದೊರೆಯದೇ ಪರದಾಡುವಂತಾಗಿದೆ.
ಕೇಂದ್ರದಲ್ಲಿ ಸರಿಯಾದ ಮೂಲಭೂತ ಸೌಕರ್ಯಗಳಿಲ್ಲ. ವಿವಿಧ ರೀತಿಯ ತಜ್ಞ ವೈದ್ಯರು ನೇಮಕ ಮಾಡಬೇಕು. ರಾತ್ರಿ ವೇಳೆಯಲ್ಲಿ ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುವುದಿಲ್ಲ. ಅವರನ್ನು ಇರುವಂತೆ ನೋಡಿಕೊಳಬೇಕು. ಹೆಚ್ಚುವರಿ ಮಕ್ಕಳ ಹಾಗೂ ದಂತ ವೈದ್ಯಾಧಿಕಾರಿಗಳ ಅವಶ್ಯಕತೆ ಇರುತ್ತದೆ, ಔಷಧಿಯು ಕೂಡ ಆಡಳಿತ ಇಲಾಖೆ ಇಂದ ಸರಿಯಾಗಿ ವಿತರಣೆಯಾಗುತ್ತಿಲ್ಲ. ಶಸ್ತ್ರ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ಹೋಗುವ ಸಂದರ್ಭ ಎದುರಾಗಿದೆ. ಮಾನ್ಯ ಸಚಿವರಾದ ತಾವುಗಳು ಈ ಕೂಡಲೇ ಸದರಿ ಸಮಸ್ಯೆಯನ್ನು ಬಗೆಹರಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಹಿದಾಯತ್ ದೊಡ್ಮನೆ, ಮೇಷಕ್, ಶ್ರೀನಿವಾಸ್ ರೆಡ್ಡಿ, ಹುಸೇನ್ ಭಾಷಾ. ಮಾದೇಶ್, ನಬಿ ರಸೂಲ್, ರಾಹುಪ್ ಗೋವಿಂದಪಲ್ಲಿ ಇದ್ದರು.