ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಚಿವ ಕೋಟ ಭೇಟಿ, ಪರಿಶೀಲನೆ

ಕೋಟ ಮೇ ೪- ಕೋಟ ಸಮುದಾಯ ಅರೋಗ್ಯ ಕೇಂದ್ರಕ್ಕೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಸೋಮವಾರ ಭೇಟಿ ನೀಡಿ ಪರಿಶೀಲನೆ ನೆಡೆಸಿದರು.

ಈ ಸಂದರ್ಭದಲ್ಲಿ ಕೋಟ ಸಮುದಾಯದ ಅರೋಗ್ಯ ಕೇಂದ್ರ ವೈದ್ಯಧಿಕಾರಿ ಡಾ.ವಿಶ್ವನಾಥ್ ಅವರು ತಮ್ಮ ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ತಮಲ್ಲಿರುವ ಕುಂದು ಕೊರತೆಗಳ ಬಗ್ಗೆ ಸಚಿವರಿಗೆ ತಿಳಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕುಂದಾಪುರ ಸರಕಾರಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿದ್ದು ಈ ಹಿನ್ನೆಲೆ ಯಲ್ಲಿ ಕುಂದಾಪುರದ ಹೆರಿಗೆ ಆಸ್ಪತ್ರೆಯನ್ನು ಕೋಟ ಸಮುದಾಯದ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಇದರಿಂದ ಕೋಟದಲ್ಲಿ ಸಾಮಾನ್ಯಗಿಂತ ಹೆರಿಗೆ ಸಂಖ್ಯೆ ಎರಡರಿಂದ ಮೂರು ಪಟ್ಟು ಜಾಸ್ತಿಯಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಬೆಡ್ ಗಳ ಕೊರತೆ ಎದುರಾಗಿದೆ. ಅದಕ್ಕಾಗಿ ಬೆಡ್ಗಳ ಸಂಖ್ಯೆ ಹೆಚ್ಚಿಸಲು ಕ್ರಮ ತೆಗೆದು ಕೊಳ್ಳಲಾಗುವುದು ಎಂದರು. ಅಲ್ಲದೆ ಈ ಆಸ್ಪತ್ರೆಯಲ್ಲಿ ಖಾಲಿ ಇರುವ ಮಕ್ಕಳ ತಜ್ಞರ ಹುದ್ದೆಯನ್ನು ಶೀಘ್ರ ದಲ್ಲಿ ಭರ್ತಿ ಮಾಡಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ನಮ್ಮಲ್ಲಿ ಆಕ್ಸಿಜನ್ ಕೊರತೆಯಿಲ್ಲ ಎಂದ ಅವರು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿ ಪೈಪ್ಲೈನ್ ಹಾಗೂ ಬಾವಿಯ ಹೂಳೆತ್ತುವ ಕಾರ್ಯವನ್ನು ಕೂಡಲೇ ಮಾಡಲು ಗ್ರಾಪಂಗಳಿಗೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಕೋಟ ಸಮುದಾಯ ಆರೋಗ್ಯ ಕೇಂದ್ರದ ಅರವಳಿಕೆ ತಜ್ಞ ಡಾ.ಸಂದೀಪ್ ಕುಮಾರ್ ಶೆಟ್ಟಿ, ದಂತವೈದ್ಯೆ ಡಾ.ಅನಾಲಿನಿ, ಕೋಟ ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ, ಉಪಾಧ್ಯಕ್ಷ ಜಯಂತಿ ಪೂಜಾರಿ, ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.