ಸಮುದಾಯದ ಬದಲಾವಣೆಗೆ ಸಮಗ್ರ ಅಭಿವೃದ್ಧಿ ಅಗತ್ಯ – ನ್ಯಾ.ಕುಮಾರ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣಾ ಸಭೆ
ರಾಯಚೂರು.ಡಿ.೦೭- ಬ್ರಾಹ್ಮಣ ಸಮುದಾಯದ ಎಲ್ಲರ ಸಮಗ್ರ ಅಭಿವೃದ್ಧಿಗಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯಲ್ಲಿ ಭಾರೀ ಬದಲಾವಣೆ ಅಗತ್ಯವಾಗಿದೆಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ ಅವರು ಹೇಳಿದರು.
ಅವರು ನಗರದ ಶ್ರೀ ಶೃಂಗೇರಿ ಶಂಕರಮಠದಲ್ಲಿ ಡಿ.೦೬ ರಂದು ನಡೆದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣಾ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ೫೦ ವರ್ಷದಿಂದ ಅಸ್ತಿತ್ವದಲ್ಲಿರುವ ಬ್ರಾಹ್ಮಣ ಮಹಾಸಭಾ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿಯನ್ನು ಕಡೆಗಣಿಸಿದೆ. ಈ ಚುನಾವಣೆಯಲ್ಲಿ ಬದಲಾವಣೆಯಾದರೇ, ಬ್ರಾಹ್ಮಣ ಸಮುದಾಯದ ಸಮಗ್ರ ಅಭಿವೃದ್ಧಿ ಸಾಧ್ಯವೆಂದರು.
ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿ ಮಹಾಸಭಾ ಬ್ರಾಹ್ಮಣರ ನೆರವಿಗೆ ಬರಲಿಲ್ಲ. ಸಹಕಾರಿ ಬ್ಯಾಂಕ್ ಮುಳುಗಿಸಿದವರಿಗೆ ಬೆಂಬಲ ನೀಡುವ ಮೂಲಕ ಅನ್ಯಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಯ ಪ್ರಜ್ಞಾವಂತ ಸಮುದಾಯದ ಬಾಂಧವರು ಈ ಬಗ್ಗೆ ಗಮನ ಹರಿಸಿ, ಬದಲಾವಣೆಗೆ ಮತ ಚಲಾಯಿಸುವಂತೆ ಕೋರಿದರು. ಮಹಾಸಭೆಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಕಾರ್ಯಗಳೇ ಇಲ್ಲ. ಬೈಲಾದಲ್ಲಿ ಅನೇಕ ಲೋಪಗಳಿವೆ. ಇನ್ನೂ ಮುಂದೆ ಈ ರೀತಿ ಚಟುವಟಿಕೆಗಳಿಗೆ ಅವಕಾಶವಿಲ್ಲದಂತೆ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವ ಅಗತ್ಯವಿದೆಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಆಕಾಂಕ್ಷಿ ಎಸ್.ರಘುನಾಥ ಅವರು ಮಾತನಾಡುತ್ತಾ, ಬ್ರಾಹ್ಮಣ ಸಮಾಜದ ಅಭಿವೃದ್ದಿಗಾಗಿ, ಹಿರಿಯ ನಾಗರೀಕರಿಗೆ ಪಿಂಚಣಿ ಯೋಜನೆ, ಸಾಮೂಹಿಕ ಆರೋಗ್ಯ ವಿಮೆ, ಶಾಲಾ, ಕಾಲೇಜು ಸ್ಥಾಪನೆ ಹಾಗೂ ವಿವಿಧೋದ್ದೇಶಗಳಿಗೆ ೧೦೦ ಕೋಟಿ ರೂ. ನಿಧಿ ಸ್ಥಾಪಿಸುವ ಚಿಂತನೆ ಹೊಂದಿರುವುದಾಗಿ ಹೇಳಿದರು. ಬೈಲಾದ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ. ಅಧ್ಯಕ್ಷರಾಗಿ ಆಯ್ಕೆಗೊಂಡರೇ, ಬ್ರಾಹ್ಮಣ ಮಹಾಸಭೆಯ ಸದಸ್ಯತ್ವವನ್ನು ೪೦ ಸಾವಿರದಿಂದ ೫ ಲಕ್ಷಕ್ಕೆ ಹೆಚ್ಚಿಸುವುದಾಗಿ ಹೇಳಿದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಹೆಚ್.ಎಸ್.ಚಿದಾನಂದ ಮೂರ್ತಿ ಮಾತನಾಡಿ, ಕೋವಿಡ್ ಸಮಯದಲ್ಲಿ ಸಮುದಾಯಕ್ಕೆ ಅಗತ್ಯವಾದ ನೆರವಿಗೆ ಬರಬೇಕಾಗಿದ್ದ ಮಹಾಸಭೆ ಇದು ತಮಗೆ ಸಂಬಂಧವೇ ಇಲ್ಲ ಎನ್ನುವುದನ್ನು ಟೀಕಿಸಿದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಆಕಾಂಕ್ಷಿಯಾದ ಎಸ್.ರಘುನಾಥ ಅವರಿಗೆ ಬೆಂಬಲಿಸುವಂತೆ ಮನವಿ ಮಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ವತ್ಸಲ ನಾಗೇಶ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷರು ಹಾಗೂ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಜಗನ್ನಾಥ ಕುಲಕರ್ಣಿ, ನಗರಾಧ್ಯಕ್ಷರಾದ ಗುರುರಾಜ ಆಚಾರ್ಯ, ಬಿ.ಶ್ಯಾಮಾಚಾರ್, ಗೋವಿಂದರಾವ್ ಸಿಂಧನೂರು, ತ್ರಿವಿಕ್ರಮ ಜೋಷಿ, ಮುರಳಿಧರ, ಡಾ.ಜಯಲಕ್ಷ್ಮೀ ಮಂಗಳಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.