ಸಮುದಾಯಗಳ ಅಭಿವೃದ್ಧಿ ಶ್ರೀಕ್ಷೇತ್ರ ಧರ್ಮಸ್ಥಳಕಾರ್ಯ ಮೇಲ್ಪಂಕ್ತಿ: ಸಗರ

(ಸಂಜೆವಾಣಿ ವಾರ್ತೆ)
ಶಹಾಪುರ:ಜ.12:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ಸಮುದಾಯಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳು ಅನುಷ್ಠಾನಗೊಂಡಿದ್ದು, ಅದರಲ್ಲಿ ದುರ್ಬಲ ಕುಟುಂಬಗಳಿಗೆ ಸಹಕಾರ ನೀಡಲು ವಾತ್ಸಲ್ಯ ಕಾರ್ಯಕ್ರಮ ಅತ್ಯಂತ ಪ್ರೇರಣೆಯಾಗಿದೆ ಎಂದು ಸಾಮಾಜಿಕ ಸೇವಕರು ಹಿರಿಯ ಪತ್ರಕರ್ತರಾದ ನಾರಾಯಣಾಚಾರ್ಯ ಸಗರ ತಿಳಿಸಿದರು.
ಬಾಪುಗೌಡ ನಗರದ ಮತ್ತು ಫಿಲ್ಟರ್ ಬೆಡ್ ಬಡಾವಣೆಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಹಲವು ಕುಟುಂಬಗಳನ್ನು ಗುರುತಿಸಿ, ಅವರಿಗೆ ನಿತ್ಯ ಉಪಯೋಗಿ ವಸ್ತುಗಳನ್ನು ನೀಡುವ ವಾತ್ಸಲ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಸರ್ವರು ಸಬಲೀಕರಣವಾಗಬೇಕು ಎಂಬುವ ಸದುದ್ದೇಶದೊಂದಿಗೆ ಪೂಜ್ಯರು ನಾಡಿನಾದ್ಯಂತ ಕಲ್ಯಾಣ ಯೋಜನೆ ರೂಪಿಸಿದ್ದು, ವಿಶೇಷವಾಗಿ ತಾಲೂಕಿನಲ್ಲಿರುವ ಕಾರ್ಯಕರ್ತರ ತಂಡ ಅಹರ್ನಿಶಿ ಕಾರ್ಯ ಮಾಡುತ್ತಿದ್ದು, ಬಹಳಷ್ಟು ಕುಟುಂಬಗಳಿಗೆ ಸಂಸ್ಥೆ ಬೆಳಕು ನೀಡಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯರ ಕಾರ್ಯಕ್ಕೆ ಸರ್ವರ ಸಹಕಾರ ಸದಾಕಾಲ ಇರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ರಿಚ್ ರೂರಲ್ ಡೆವಲಪ್‍ಮೆಂಟ್ ಸೊಸೈಟಿಯ ಶೋಭಾ ಅವರು ಮಾತನಾಡಿ ಆರ್ಥಿಕವಾಗಿ ಸಂಕಷ್ಟದಲ್ಲಿರುವವರನ್ನು ಗುರುತಿಸಿ ಅವರಿಗೆ ವಿಶ್ವಾಸ ತುಂಬುವ ಕಾರ್ಯ ದೇವರ ಸೇವೆಗೆ ಸಮಾನವಾಗಿದ್ದು, ಜ್ಞಾನ ವಿಕಾಸದ ಮೂಲಕ ಸಹಾಯಹಸ್ತ ನೀಡುವ ಕಾರ್ಯ ಮಾಡುತ್ತಿರುವ ಧರ್ಮಸ್ಥಳ ಸಂಸ್ಥೆ ಸಾಕ್ಷಿಯಾಗಿದೆ ಎಂದರು.
ಇದುವರೆಗೂ ತಾಲೂಕಿನಲ್ಲಿ 57 ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ವಿತರಿಸಲಾಗಿದೆ. ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಗರಾಜ ಹದ್ಲಿ, ಭಾರತಿ, ಶಿವಲೀಲಾ,ಸಕ್ಕುಬಾಯಿ, ಸಾವಿತ್ರಿ ಅವರು ಉಪಸ್ಥಿತರಿದ್ದರು.

Spread the love