ಸಮೀರ್ ಉತ್ತಮ ನಿರ್ಧಾರ – ಕಾಂಗ್ರೆಸ್ಸಿನಿಂದ ನ್ಯಾಯ ಸಾಧ್ಯ

ರಾಯಚೂರು.ನ.08- ನಗರಸಭೆ ಅಧಿಕಾರ ಚುಕ್ಕಾಣಿ ಬಿಜೆಪಿ ಪಾಲಾಗದಂತೆ ಅಧಿಕಾರ ತ್ಯಾಗ ಮಾಡಿ, ಸಾಜೀದ್ ಸಮೀರ್ ಅವರು ಅತ್ಯಂತ ಉತ್ತಮ ನಿರ್ಧಾರ ಕೈಗೊಂಡಿದ್ದಾರೆಂದು ರಾಯಚೂರು ನವ ನಿರ್ಮಾಣ ಸಂಘದ ಸಿರಾಜ್ ಜಾಫ್ರಿ ಅವರು ಹೇಳಿದ್ದಾರೆ.
ಅವರು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿ, ನಗರಸಭೆಯಲ್ಲಿ ನಡೆದ ರಾಜಕೀಯ ಬೆಳವಣಿಗೆ ಕುರಿತು ಸಾಜೀದ್ ಸಮೀರ್ ಅವರ ನಿನ್ನೆಯ ಹೇಳಿಕೆ ಅನೇಕ ಗೊಂದಲಗಳಿಗೆ ಉತ್ತರವಾಗಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರಿಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ಕಾರಣ ಎನ್ನುವ ಭಾವನಾತ್ಮಕ ಆವೇಷದಿಂದ ಎನ್.ಎಸ್. ಬೋಸರಾಜು ಮತ್ತು ರವಿ ಬೋಸರಾಜು ವಿರುದ್ಧ ಟೀಕೆ ಮಾಡಲಾಗಿತ್ತು. ಆದರೆ, ಸಾಜೀದ್ ಸಮೀರ್ ಅವರ ಹೇಳಿಕೆ ನಂತರ ನಮ್ಮವರೇ ಆದ ರಾಜಕೀಯ ಮುಖಂಡರು ಬಿಜೆಪಿಯೊಂದಿಗೆ ಕೈ ಜೋಡಿಸಿದ ಪರಿಣಾಮ ಅಧ್ಯಕ್ಷ ಸ್ಥಾನ ಕೈತಪ್ಪಲು ಕಾರಣವಾಗಿದೆ.
ಕಳೆದ 70 ವರ್ಷಗಳಿಂದ ನಗರಸಭೆ ಅಧ್ಯಕ್ಷ ಸ್ಥಾನ ಅಲ್ಪಸಂಖ್ಯಾತರಿಗೆ ಕೊಡಲು ಯಾರು ಮುಂದೆ ಬಂದಿಲ್ಲ. ಆದರೆ, ಈಗ ಬೋಸರಾಜು ಮತ್ತು ರವಿ ಬೋಸರಾಜು ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಇವರನ್ನು ಬಿಟ್ಟರೇ, ನಾವು ಮತ್ತೇ 70 ವರ್ಷ ಅಧಿಕಾರ ದೊರೆಯುವುದು ಕಷ್ಟ ಎಂದು ಹೇಳಿದ್ದಾರೆ. ಅಲ್ಪಸಂಖ್ಯಾತರಿಗೆ ನಗರಸಭೆ ಅಧ್ಯಕ್ಷ ಸ್ಥಾನದ ಅವಕಾಶ ದೊರೆತಿಲ್ಲವೆಂದು ಕೆಲವರು ದಾರಿ ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಇಂತಹ ತಪ್ಪು ಮಾಹಿತಿಗಳಿಗೆ ಯುವಕರು ಮತ್ತು ಇತರರು ಬಲಿಪಶು ಆಗದೇ, ರಾಜಕೀಯ ಭವಿಷ್ಯತ್ತಿನತ್ತ ಎಚ್ಚರಿಕೆ ಹೊಂದಿರಬೇಕು. ಇದೇ ಅಂತಿಮ ಚುನಾವಣೆಯಲ್ಲ. ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವ ಭರವಸೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಬಲಗೊಳಿಸುವ ಅಗತ್ಯವಿದೆಂದು ಹೇಳಿದರು.
ಬಷಿರುದ್ದೀನ್ ಅವರ ರಾಜೀನಾಮೆಗೆ ಪ್ರತಿಕ್ರಿಯಿಸಿದ ಅವರು, ಅಲ್ಪಸಂಖ್ಯಾತರಿಗೆ ಅವಕಾಶ ಸಿಕ್ಕಿಲ್ಲ ಎನ್ನುವ ನೋವು ಭಾವನಾತ್ಮಕವಾಗಿರುತ್ತದೆ. ಇದರಿಂದ ರಾಜೀನಾಮೆ ನೀಡುವ ತೀರ್ಮಾನ ಅಗತ್ಯವಿಲ್ಲ. ನಗರ ಕ್ಷೇತ್ರದ ರಾಜಕೀಯ ಹಿತಾಸಕ್ತಿ ಮತ್ತು ಅಧಿಕಾರ ಹಿಡಿಯಲು ಇಂತಹ ನಿರ್ಧಾರಗಳಿಂದ ತೊಂದರೆಯಾಗುತ್ತದೆ. ಮುಂದಿನ ಅವಧಿಯಲ್ಲಿ ಸಮೀರ್ ಅವರಿಗೆ ಅಧ್ಯಕ್ಷ ಸ್ಥಾನ ದೊರೆಯುವ ನಿರೀಕ್ಷೆ ಹಿನ್ನೆಲೆಯಲ್ಲಿ ಬಷೀರ್ ಅವರು ತಮ್ಮ ರಾಜೀನಾಮೆ ನಿರ್ಧಾರ ಬದಲಿಸಲೆಂದು ಅವರು ಮನವಿ ಮಾಡಿದ್ದಾರೆ.