ಸಮೀಕ್ಷೆ ಸುಳ್ಳು ಜೆಡಿಎಸ್ ಗೆಲುವು ನಿಜ

ಬೆಂಗಳೂರು,ಏ.೧- ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಯಾರೂ ನಂಬಲು ಹೋಗಬೇಡಿ,ಕಾಂಗ್ರೆಸ್- ಬಿಜೆಪಿ ಹಣ ಕೊಟ್ಟು ಮಾಡಿಸುತ್ತಿರುವ ಸಮೀಕ್ಷೆಗಳು,ಈ ಬಾರಿ ಜೆಡಿಎಸ್ ೧೨೦ ಸ್ಥಾನಗಳ ಗಡಿ ಮುಟ್ಟಲಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಯಲಹಂಕ ವಿಧಾನಸಭಾ ಕ್ಷೇತ್ರದ ದಾಸನಪುರ ಹೋಬಳಿಯಲ್ಲಿ ಕಾಂಗ್ರೆಸ್ ಮುಖಂಡ ಟಿಸಿಐ ಚಂದ್ರಪ್ಪ ಹಾಗೂ ಅವರ ನೂರಾರು ಬೆಂಬಲಿಗರನ್ನು ಜೆಡಿಎಸ್ ಗೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದೆ.ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರವಿಡುವಂತಹ ಸಮಯ ಹತ್ತಿರವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಹಾಸನ ಕ್ಷೇತ್ರ ಸೇರಿದಂತೆ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗುವುದು ಎಂದ ಅವರು ಅಭ್ಯರ್ಥಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಹೇಳಿದರು.
ಯಲಹಂಕ ಕ್ಷೇತ್ರದಲ್ಲಿ ದೌರ್ಜನ್ಯ, ದಬ್ಬಾಳಿಕೆ ರಾಜಕಾರಣಕ್ಕೆ ಮುಕ್ತಿ ಸಿಗಲಿದೆ.ಕ್ಷೇತ್ರದ ಕಾರ್ಯಕರ್ತರು ಹೆದರಬೇಕಿಲ್ಲ.ನಿಮಗೆ ಸಣ್ಣ ಸಮಸ್ಯೆಯಾದರೂ ಒಂದು ಪೋನ್ ಮಾಡಿ ನಾನು ನಿಮ್ಮ ಜೊತೆಗೆ ಇರುತ್ತೇನೆ.ಯಾವ ಕೇಸು ಏನಕ್ಕೂ ಹೆದರಬೇಡಿ,ಅದರನ್ನು ಪರಿಹರಿಸುತ್ತೇನೆ ಎಂದು ಅವರು ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿದರು.ಯಲಹಂಕ ಕ್ಷೇತ್ರದ ಹಾಲಿ ಶಾಸಕರ ಪಾಪದ ಕೊಡ ತುಂಬಿದೆ.ದುಡ್ಡು ಎರಚಿ ಓಟು ಹಾಕಿಸಿಕೊಳ್ಳುತ್ತೇನೆ ಎಂಬ ಅಹಂಕಾರದಲ್ಲಿದ್ದಾರೆ.ಅದಕ್ಕೆ ಕ್ಷೇತ್ರದ ಜನತೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದ ಕುಮಾರಸ್ವಾಮಿ,೨೦೦೮,೨೦೧೩ ಹಾಗೂ ೨೦೧೮ ಮೂರೂ ಸಲ ವಿಧಾನಸಭಾ ಚುನಾವಣೆಯಲ್ಲಿ ಯಲಹಂಕ ಕ್ಷೇತ್ರದಲ್ಲಿ ಜೆಡಿಎಸ್ ಕಡಿಮೆ ಅಂತರದಲ್ಲಿ ಸೋಲುವ ಮೂಲಕ ಎರಡನೇ ಸ್ಥಾನದಲ್ಲಿತ್ತು.ಈ ಬಾರಿ ಗೆಲುವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪೊಲೀಸ್ ಅಧಿಕಾರಿಗಳು, ಬಿಡಿಎ ಅಧಿಕಾರಿಗಳು ಸೇರಿದಂತೆ ಅಧಿಕಾರಿ ವರ್ಗದವರು ಆಡಳಿತದಲ್ಲಿರುವವರ ಮಾತು ಕೇಳಿಕೊಂಡು ನಮ್ಮ ಕಾರ್ಯಕರ್ತರಿಗೆ ತೊಂದರೆ ಕೊಡ್ತಿದ್ದೀರಾ,ಇನ್ಮಂದೆ ಹಾಗಾದರೆ ಕುಮಾರಸ್ವಾಮಿ ಏನು ಅಂತಾ ತೋರಿಸಬೇಕಾಗುತ್ತೆ,ಹಿಂದೆ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿನೇ ಬೇರೆ,ಈಗಿನ ಕುಮಾರಸ್ವಾಮಿನೇ ಬೇರೆ ,ಅಕ್ರಮಗಳಿಗೆ ಬೆಂಬಲ ನೀಡಿದರೆ ಏನು ಮಾಡಬೇಕು ಎಂಬುದು ಗೊತ್ತಿದೆ ಎಂದು ಗುಡುಗಿದರು.
ಎದುರಾಳಿಗಳು ಕ್ಷೇತ್ರಕ್ಕೆ ಹೊರಗಿನಿಂದ ಗೂಂಡಾಗಳನ್ನು ಕರೆಸಿದರೆ ನನಗೆ ಮಾಹಿತಿ ನೀಡಿ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದ ಕುಮಾರಸ್ವಾಮಿ,ಬಿಜೆಪಿಯನ್ನು ರಾಜ್ಯದಿಂದ ದೂರ ಜನತೆ ಇಡುತ್ತಾರೆ,ಯಲಹಂಕದಲ್ಲೂ ದೌರ್ಜನ್ಯದಿಂದ ನಲುಗಿರುವ ಜನತೆ ಮುಕ್ತಿ ಬಯಸಿದ್ದಾರೆ ಎಂದು ಹೇಳಿದರು.ಯಲಹಂಕ ಜೆಡಿಎಸ್ ಅಭ್ಯರ್ಥಿ ಮುನೇಗೌಡ, ಟಿಸಿಐ ಚಂದ್ರಣ್ಣ,ವಿಧಾನಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ,ಮುಖಂಡರಾದ ಎನ್ ಕೃಷ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.