ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ಕಲ್ಪಿಸಿ

ಭಾಲ್ಕಿ:ಮಾ.19: ತಾಲೂಕಿನ ವಿವಿಧೆಡೆ ಅಕಾಲಿಕ ಮಳೆ, ಬಿರುಗಾಳಿಗೆ ಗಿಡ ಮರಗಳು ಧರೆಗಿಳಿದು ಅಪಾರ ಹಾನಿ ಸಂಭವಿಸಿದೆ.
ಹಾನಿಗೀಡಾದ ಪ್ರದೇಶಗಳಿಗೆ ಶನಿವಾರ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೂಡ್ಲಿ, ನಾಗರಾಳ, ನಿಟ್ಟೂರು(ಬಿ) ಸೇರಿದಂತೆ ವಿವಿಧ ಗ್ರಾಮ ಮತ್ತು ಹೊಲಗಳಿಗೆ ಭೇಟಿ ನೀಡಿದ ಅವರು, ಬೆಳೆಹಾನಿ ವೀಕ್ಷಿಸಿದರು.
ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದು ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಗೆ ವಿವಿಧೆಡೆ ಜೋಳ, ಕಡಲೆ, ಕುಸುಬೆ ಸೇರಿ ವಿವಿಧ ಹಿಂಗಾರು ಬೆಳೆಗಳು ಹಾನಿಗೀಡಾಗಿವೆ.
ಕೂಡ್ಲಿ ಗ್ರಾಮದಲ್ಲಿ ಬಿರುಗಾಳಿ ಮಳೆಗೆ ಮದನರಾವ ಪಾಟೀಲ್ ಅವರ ಕೋಳಿ ಫಾರಂ ಶೆಡ್ ಕಿತ್ತುಹೋಗಿದೆ. ಸಾವಿರಾರೂ ಕೋಳಿಗಳು ಮೃತಪಟ್ಟಿದ್ದು ಲಕ್ಷಾಂತರ ರೂ ನಷ್ಟ ಅನುಭವಿಸಿದ್ದಾರೆ.
ಕೆಲ ಗುಡಿಸಲಗಳು, ತಗಡಿನ ಮನೆಗಳ ಪತಾರಗಳು ಹಾರಿಹೋಗಿವೆ. ಹಲವೆಡೆ ವಿದ್ಯುತ್ ಕಡಿತಗೊಂಡಿದೆ. ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗಿದ್ದು ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
ಪ್ರತಿಸಲ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಸಂಕಷ್ಟ ಅನುಭವಿಸುತ್ತಲೇ ಇದ್ದಾರೆ. ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು.
ಚುನಾವಣೆ ನೆಪವಾಗಿಟ್ಟಿಕೊಂಡು ಸರಕಾರ ಸುಮ್ನೆ ಕೂಡುವುದು ಬೇಡ. ಅಧಿಕಾರಿಗಳಿಗೆ ಸೂಚಿಸಿ ಸಮರ್ಪಕವಾಗಿ ಸಮೀಕ್ಷೆ ನಡೆಸಿ ತಕ್ಷಣ ಹಾನಿ ಸಂಭವಿಸಿದ ಸಂತ್ರಸ್ತರಿಗೆ ತಕ್ಷಣ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.