ಸಮೀಕ್ಷೆಗಳು ತಿರುವು ಮುರುವಾಗಲಿವೆ: ಸಿಎಂ

ಬೆಂಗಳೂರು,ಮೇ೧೧:ಮತಗಟ್ಟೆ ಸಮೀಕ್ಷೆಗಳು ಹಲವು ಬಾರಿ ಉಲ್ಟಾ ಆಗಿದೆ. ಈಗಲೂ ಸಮೀಕ್ಷೆಗಳು ಉಲ್ಟಾ ಆಗಲಿವೆ. ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಯ ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್‌ಗೆ ೧೦೭ ಸ್ಥಾನ ಎಂದು ಹೇಳಿದ್ದವು. ಆದರೆ, ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಈಗಲೂ ಅದೇ ನಂಬಿಕೆ ಇದೆ ಎಂದರು.
ಪ್ರಧಾನಿ ಮೋದಿ ಅವರ ಪ್ರಚಾರ ಬಿಜೆಪಿಗೆ ಪ್ಲಸ್ ಆಗಿದೆ, ಯುವಕರು ಮತ್ತು ಮಹಿಳೆಯರು ನಮ್ಮ ಪರವಾಗಿ ಮತದಾನ ಮಾಡಿದ್ದಾರೆ. ನನಗೆ ವಿಶ್ವಾಸವಿದೆ. ನಾವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದರು.
ಅತಂತ್ರ ವಿಧಾನಸಭೆ ಎಂಬ ಪ್ರಶ್ನೆಗಳಿಗೆ ನಾನು ಉತ್ತರ ನೀಡಲ್ಲ. ೧೫೦ ಸ್ಥಾಣ ಬರುತ್ತದೆ ಎಂದು ನಾನು ಎಲ್ಲೂ ಹೇಳಿಲ್ಲ. ಆದರೆ, ಬಹುಮತ ಎಂದು ಹೇಳಿದ್ದೇನೆ. ಈಗಲೂ ಅದೇ ಹೇಳಿಕೆಗೆ ಬದ್ಧ ಎಂದರು.
ಶಿಗ್ಗಾವಿ ಕ್ಷೇತ್ರದಲ್ಲೂ ನಾನು ಭಾರಿ ಅಂತರದಿಂದ ಗೆಲ್ಲುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅವರು ಹೇಳಿದರು.
ಸವದತ್ತಿ ಯಲ್ಲಮ್ಮಗೆ ವಿಶೇಷ ಪೂಜೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ತಮ್ಮ ಮನೆ ದೇವರು ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ತಮ್ಮ ಪತ್ನಿ ಚೆನ್ನಮ್ಮ ಜತೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಸಿ.ಸಿ. ಪಾಟೀಲ್ ಸಹ ಇದ್ದರು.